ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆದೇಶದಂತೆ 3054 ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಸಚಿವ ಕೆ.ಎಸ್.ಈಶ್ವರಪ್ಪರ ಈ ಆದೇಶದ ಹಿಂದಿನ ಕಾರಣ ಅನುದಾನ ಹಾಗೂ ಕೈಗೊಂಡ ಕಾಮಗಾರಿಗಳ ನಡುವಿನ ಗೊಂದಲ ಎಂದು ತಿಳಿದು ಬಂದಿದೆ.
2018-19 ಹಾಗೂ 2019-20 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ 900 ಕೋಟಿ ರೂ. ಮೊತ್ತದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಯ 3054 ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚನೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆದೇಶದ ಮೇರೆಗೆ ಅವರು ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದ್ದಾರೆ. ಈ ಕಾಮಗಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರದಂತೆ ಸ್ಥಗಿತಗೊಳಿಸಿ, ಯಥಾಸ್ಥಿತಿ ಕಾಪಾಡುವಂತೆ ಮತ್ತು ಮುಂದಿನ ಆದೇಶ ನೀಡುವವರೆಗೂ ಕಾಮಗಾರಿಗಳನ್ನು ಅನುಷ್ಠಾನಗೊಳಿಸದಂತೆ ನಿರ್ದೇಶನ ನೀಡಿದ್ದಾರೆ.
ಮೊನ್ನೆ ಗುರುವಾರ ವಿಕಾಸ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಇಲಾಖೆ ಉನ್ನತಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಗ್ರಾಮೀಣ ರಸ್ತೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಕಾಮಗಾರಿಗಳ ಮರು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದರು.
ಕಾಮಗಾರಿ ಸ್ಥಗಿತಕ್ಕೆ ಕಾರಣವೇನು?:
2018-19 ಮತ್ತು 2019-20ನೇ ಸಾಲಿನಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕಳೆದ ಬಜೆಟ್ ನಲ್ಲಿ ಅನುದಾನ ಕೇವಲ 27 ಕೋಟಿ ರೂ. ಇಡಲಾಗಿತ್ತು. ಆದರೂ 900 ಕೋಟಿ ರೂಗಳ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಇದು ಹೇಗೆ ಸಾಧ್ಯವೆಂಬ ಸಂಶಯವಿದೆ. ಈ ಸಂಬಂಧ ಎಲ್ಲಾ ಕಾಮಗಾರಿಗಳನ್ನು ಮರು ಪರಿಶೀಲನೆ ನಡೆಸಲು ಸಚಿವರು ತೀರ್ಮಾನಿಸಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅನುದಾನ ಹಂಚಿಕೆ, ಎಲ್ಲೆಲ್ಲಿ ಕಾಮಗಾರಿ ನಡೆಸಲಾಗಿದೆ, ಎಲ್ಲಿ ಕಾಮಗಾರಿ ಇನ್ನೂ ಆರಂಭಿಸಲಾಗಿಲ್ಲ, ಯಾವ್ಯಾವ ಕಾಮಗಾರಿಗಳು ಬಾಕಿ ಉಳಿದಿದೆ, ಬಾಕಿ ಅನುದಾನ, ಖರ್ಚಾದ ಅನುದಾನ ಸೇರಿದಂತೆ ಎಲ್ಲಾ ಮಾಹಿತಿ ಒಳಗೊಂಡು ಸಮಗ್ರ ಹಾಗೂ ವಸ್ತು ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಕೆಲವು ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಸಾಕಷ್ಟು ಅನುಮಾನ ಮೂಡಿದ್ದು, ಈ ಹಿನ್ನೆಲೆಯಲ್ಲಿ ವರದಿ ನೀಡುವಂತೆ ಸಚಿವರು ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಹಿಂದಿನ ಮೈತ್ರಿ ಸರ್ಕಾರದ ಯೋಜನೆಗಳು ಹಾಗೂ ಕಾಮಗಾರಿಗಳಿಗೆ ತಡೆ ನೀಡಿ ತನಿಖೆ ನಡೆಸುತ್ತಿದೆ. ಈಗ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿಯೂ ಕಾಮಗಾರಿಗಳಿಗೆ ತಡೆ ನೀಡಿ, ವಸ್ತುಸ್ಥಿತಿಯ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ರಾಜ್ಯದ 21 ಜಿಲ್ಲೆಗಳ 102 ತಾಲೂಕುಗಳಲ್ಲಿ ಭೀಕರ ಪ್ರವಾಹ ಹಾಗೂ ಅತಿವೃಷ್ಠಿಯಿಂದಾಗಿ ಗ್ರಾಮೀಣ ರಸ್ತೆಗಳು ನೀರು ಪಾಲಾಗಿವೆ. ಈ ಮಧ್ಯೆ ಕಾಮಗಾರಿಗಳಿಗೆ ತಡೆ ಹಿಡಿದಿರುವುದು ಅಚ್ಚರಿ ಮೂಡಿಸಿದೆ.