ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯನ್ನು ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಕ್ಕೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗರಂ ಆಗಿದ್ದಾರೆ.
ಇಂದು ನಗರದ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖರ್ಗೆಯವರಂತಹ ಹಿರಿಯ ನಾಯಕರಿಂದ ಇಂತಹ ಕೀಳು ಮಟ್ಟದ ಟೀಕೆಯನ್ನು ನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್ಸಿಗರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದನ್ನು ಬಿಟ್ಟರೆ ಬೇರೆ ಕೆಲಸವೇ ಇಲ್ಲವೆಂದು ಟಾಂಗ್ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಸ್ನೇಹದ ಕಾರಣದಿಂದಾಗಿಯೇ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಅದು ಕೇವಲ ವ್ಯವಹಾರಿಕ ಭೇಟಿಯಾಗಿದ್ದಿದ್ದರೆ ಹಿಂದಿನ ಅಮೆರಿಕ ಅಧ್ಯಕ್ಷರುಗಳು ಮಾಡಿದಂತೆ ದೆಹಲಿಗೆ ಬಂದು ಒಪ್ಪಂದಕ್ಕೆ ಸಹಿ ಮಾಡಿ ವಾಪಸ್ ಹೋಗುತ್ತಿದ್ದರು. ಈಗ ಟ್ರಂಪ್ ಭೇಟಿಯಿಂದ ಅಮೆರಿಕ ಮತ್ತು ಭಾರತದ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಟ್ರಂಪ್ ಭೇಟಿಯನ್ನು ಶೆಟ್ಟರ್ ಸಮರ್ಥಿಸಿಕೊಂಡರು. ಇದೇ ವೇಳೆ ಹುಬ್ಬಳ್ಳಿಯ ಶಾಲೆಯೊಂದರ ಗೋಡೆಯ ಮೇಲೆ ಪಾಕ್ ಪರ ಬರಹ ಕಂಡು ಬಂದಿರುವುದಕ್ಕೂ ಕಾಂಗ್ರೆಸ್ಸಿಗರ ಕುಮ್ಮಕ್ಕೇ ಕಾರಣ. ಒಂದು ವರ್ಗವನ್ನು ವೋಲೈಸಲು, ಓಟ್ ಬ್ಯಾಂಕ್ ರಾಜಕಾರಣ ಮಾಡಲು ಕಾಂಗ್ರೆಸ್ ಪ್ರಮುಖರು ಸಿಎಎ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅದರ ಪರಿಣಾವಾಗಿಯೇ ಪಾಕ್ ಪರ ಹೇಳಿಕೆ, ಬರಹಗಳು ಕಂಡುಬರುತ್ತಿವೆ ಎಂದು ಸಚಿವ ಶೆಟ್ಟರ್ ಗಂಭೀರವಾಗಿ ಆರೋಪಿಸಿದರು.
ಇನ್ನು, ಮಹದಾಯಿ ಯೋಜನೆ ಗೆಜೆಟ್ ನೊಟೀಫಿಕೇಷನ್ ಹೊರಡಿಸಲು ಸುಪ್ರಿಂಕೋರ್ಟ್ ಆದೇಶ ನೀಡಿದೆ. ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಒಂದು ವಾರ ಅಥವಾ ಆರು ತಿಂಗಳು ಸಮಯಾವಕಾಶ ಅಂತೇನು ಇಲ್ಲ. ಆದಷ್ಟು ಶೀಘ್ರದಲ್ಲೇ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ. ಅದಕ್ಕಾಗಿ ಕೇಂದ್ರದ ಬಳಿ ನಿಯೋಗದಲ್ಲಿ ತೆರಳಲು ಉದ್ದೇಶಿಸಿದ್ದೇವೆ ಎಂದು ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.