ಬೆಂಗಳೂರು : ಹೊಸ ದಶಕದಲ್ಲಿ ಹೊಸ ಯುಗ ಸೃಷ್ಟಿಸುವ ಬಜೆಟ್ ಇದಾಗಿದೆ. ಕೇಂದ್ರ ಸರ್ಕಾರ ಕೋವಿಡ್ ನಂತರದ ಆರ್ಥಿಕತೆಗೆ ಉತ್ತೇಜನ ನೀಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿರುವುದು ಇಂದಿನ ಕೇಂದ್ರ ಬಜೆಟ್ನಲ್ಲಿ ಕಾಣಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಆಯವ್ಯಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರೋಗ್ಯ, ಎಂಎಸ್‌ಎಂಇ, ಸ್ಟಾರ್ಟ್ ಅಪ್ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಗೆ ಕೇಂದ್ರ ಆಯವ್ಯಯ ಮುನ್ನುಡಿ ಬರೆದಿದೆ. ಎಂಎಸ್‌ಎಂಇಗಳಿಗೆ 15,700 ಕೋಟಿ ಅನುದಾದ ನೀಡಲಾಗಿದ್ದು, 2 ಪಟ್ಟು ಹೆಚ್ಚು ನೀಡಲಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.
ಓದಿ: ಇದೇ ವರ್ಷ ಚುನಾವಣೆ: ಬಜೆಟ್ನಲ್ಲಿ ಪ.ಬಂಗಾಳ, ಕೇರಳ, ತ.ನಾಡು, ಅಸ್ಸೋಂಗೆ ಭರ್ಜರಿ ಅನುದಾನ!
ಸಣ್ಣ ಕಂಪನಿಗಳ ವ್ಯಾಖ್ಯಾನ ಬದಲು ಮಾಡುವ ಮೂಲಕ ಸುಮಾರು 2 ಲಕ್ಷ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಏಕವ್ಯಕ್ತಿ ಕಂಪನಿಗಳ ಸ್ಥಾಪನೆಗೂ ಪ್ರೋತ್ಸಾಹ ನೀಡಲಾಗಿದೆ. ಕನಿಷ್ಟ ಕೂಲಿಯನ್ನು ಎಲ್ಲಾ ವಿಭಾಗದ ಕೂಲಿ ಕಾರ್ಮಿಕರಿಗೂ ಅನ್ವಯ ಮಾಡಿರುವುದು ಹಾಗೂ ಮಹಿಳೆಯರು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ಅನುವು ಮಾಡಿ ಕೊಟ್ಟಿರುವುದು ಸಂತಸದ ವಿಷಯ ಎಂದರು.
ಸ್ಟಾರ್ಟ್ ಅಪ್ ಉದ್ದಿಮೆಗಳೀಗೆ ಇನ್ನು 1 ವರ್ಷ ರಿಲೀಪ್ ನೀಡಲಾಗಿದ್ದು, ಬಂಡವಾಳದ ಮೇಲಿನ ಲಾಭಕ್ಕೆ ತೆರಿಗೆ ವಿಧಿಸುವುದಿಲ್ಲ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ. ಇದು ದೇಶದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳ ಬೆಳವಣಿಗೆ ಬಹಳ ಸಹಾಯಕವಾಗಲಿದೆ. ಪ್ರಗತಿಪರ ಹಾಗೂ ಕೋವಿಡ್ ಸಂಕಷ್ಟದಿಂದ ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಉತ್ತಮ ಹಾದಿಯನ್ನು ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ವಿತ್ತೀಯ ಸಚಿವರು ತೋರಿಸಿದ್ದಾರೆ ಎಂದರು.