ಆನೇಕಲ್: 44 ವರ್ಷಗಳಿಂದ ಕೃಷಿ ಭೂಮಿಯ ಶೇ 2 ರಷ್ಟು ಮಾತ್ರ ಕೈಗಾರಿಕೆಗಳಿಗೆ ನೀಡಲಾಗಿದೆ. ಹೀಗಾದರೆ ಅಭಿವೃದ್ಧಿ ಹೇಗೆ.? ಅದಕ್ಕಾಗಿಯೇ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಲಾಗಿದೆ ಎಂದು ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.
1966ರ ಭೂ ಸುಧಾರಣಾ ಕಾಯಿದೆಯಿಂದ ಕೈಗಾರಿಕೆಗಳು ಉಳಿದಲ್ಲಿಯೇ ಉಳಿದು ಭೂ ಹಸ್ತಾಂತರ ತುಕ್ಕು ಹಿಡಿದಿತ್ತು. ಅಂದಿನಿಂದ 2020ರ ವರೆಗೆ ಇದ್ದ ಕೃಷಿ ಭೂಮಿಯ ಶೇ 2ರಷ್ಟು ಭೂಮಿಯನ್ನು ಮಾತ್ರ ಕೈಗಾರಿಕಾ ಪ್ರದೇಶಗಳಿಗೆ ಕಠಿಣ ಕಾನೂನು ಕ್ರಮಗಳಂತೆ ಬಳಸಿಕೊಳ್ಳುವಂತಾಗಿದೆ. ಇದರಿಂದ ಯಾವುದೇ ಪ್ರದೇಶದ ಅಭಿವೃದ್ಧಿ ಹೇಗೆ ಸಾಧ್ಯ. ಅದಕ್ಕಾಗಿಯೇ ಸುಗ್ರೀವಾಜ್ಞೆ ಮೂಲಕ ಕೃಷಿ ಭೂಮಿ ಸುಲಭವಾಗಿ ಕೈಗಾರಿಕೆಗಳಿಗೆ ಸಿಗುವಂತೆ ಕಾನೂನು ತಿದ್ದುಪಡಿ ತರಲಾಗಿದೆ ಎಂದು ಭೂ ಕಾಯ್ದೆ ತಿದ್ದುಪಡಿಯನ್ನು ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡರು.
ಆನೇಕಲ್ ತಾಲೂಕಿನ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬೊಮ್ಮಸಂದ್ರ ಜಂಕ್ಷನ್ ಮೇಲ್ಸೇತುವೆ ಕೆಳಗೆ ಮೇಲ್ದರ್ಜೆಗೇರಿಸಿದ ಸಂಚಾರ ವ್ಯವಸ್ಥೆಯನ್ನು ಚಾಲನೆಗೊಳಿಸಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ವಿಷಯ ಹಂಚಿಕೊಂಡರು. ಬೊಮ್ಮಸಂದ್ರ ಕೈಗಾರಿಕಾಭಿವೃದ್ಧಿ ಮಂಡಳಿಯಿಂದ ಸಿಗ್ನಲ್, ಪೊಲೀಸ್ ಚೌಕಿ, ಬಣ್ಣ, ಪಾರ್ಕ್, ವಿದ್ಯುತ್ ದೀಪ ಮುಂತಾದ ಮೂಲಭೂತ ಸೌಕರ್ಯಗಳನ್ನು ಲೋಕಾರ್ಪಣೆ ಮಾಡಿದರು. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶವನ್ನು ಉನ್ನತೀಕರಿಸಲು ಇಲಾಖೆಯಿಂದ ನೆರವು ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಸಂಸದ ಡಿ.ಕೆ. ಸುರೇಶ್, ಆನೇಕಲ್ ಶಾಸಕ ಬಿ. ಶಿವಣ್ಣ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಸದಸ್ಯ ರಾಮ್ ಮೋಹನ್, ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್, ಎಸ್ಪಿ ರವಿ ಚನ್ನಣ್ಣನವರ್, ಬಿಐಎ ಅಧ್ಯಕ್ಷ ಪ್ರಸಾದ್ ಉಪಸ್ಥಿತರಿದ್ದರು.