ಬೆಂಗಳೂರು: ಸಿದ್ದರಾಮಯ್ಯ ಯಾವಾಗ ಜ್ಯೋತಿಷಿ ಆದ್ರೋ ಗೊತ್ತಿಲ್ಲ ಎಂದು, ಸಚಿವ ಜಗದೀಶ್ ಶೆಟ್ಟರ್ ಮಾಜಿ ಸಿಎಂಗೆ ಟಾಂಗ್ ನೀಡಿದರು.
ಮಧ್ಯಂತರ ಚುನಾವಣೆಯಾಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಹೋದ ಮೇಲೆ ಅವರು ಖಾಲಿ ಆಗಿದ್ದಾರೆ, ಅವರಿಗೆ ಅಧಿಕಾರ ಇಲ್ಲ. ಅದಕ್ಕಾಗಿ ಈ ರೀತಿ ಹೇಳುತ್ತಿದ್ದಾರೆ ಅವರ ಕನಸು ನನಸಾಗಲ್ಲ. ಮಧ್ಯಂತರ ಚುನಾವಣೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಬಿಐ, ಇಡಿ ದುರುಪಯೋಗ ಎಂಬ ಡಿಕೆಶಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ಡಿಕೆಶಿಯವರಿಗೆ ಹಾಗೆ ಅನಿಸುತ್ತಿದೆ. ಅವರ ವಿರುದ್ಧ ತನಿಖೆ ನಡೆಯುತ್ತಿದೆ, ಹಾಗಾಗಿ ಅವರಿಗೆ ಹಾಗೆ ಅನ್ನಿಸಿರಬಹುದು. ಅವರ ಈ ಭಾವನೆಗೆ ನಾವು ಏನೂ ಮಾಡಕ್ಕಾಗುವುದಿಲ್ಲ. ಇಡಿ, ಸಿಬಿಐ, ಐಟಿ ಸ್ವಾಯತ್ತ ಸಂಸ್ಥೆಗಳು. ಕೇಂದ್ರದಿಂದ ಈ ಸಂಸ್ಥೆಗಳ ದುರುಪಯೋಗ ಆಗಿಲ್ಲ ಎಂದು ತಿಳಿಸಿದರು.
ಹೊಸ ಕೈಗಾರಿಕೆ ನೀತಿ:
ಹೊಸ ಕೈಗಾರಿಕಾ ನೀತಿ ಜಾರಿಗೆ ಮುಂದಾಗಿದ್ದೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ಬೇರೆ ರಾಜ್ಯಗಳ ಕೈಗಾರಿಕಾ ನೀತಿಗಳನ್ನೂ ಅಧ್ಯಯನ ಮಾಡುತ್ತಿದ್ದೇವೆ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕಾ ನೀತಿ ಜಾರಿ ಮಾಡುತ್ತೇವೆ.ಹಿಂದಿನ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನಕ್ಕೆ ತೀರ್ಮಾನಿಸಿತ್ತು. ಸಿಎಂ ಜೊತೆ ಚರ್ಚಿಸಿ ಬಂಡವಾಳ ಹೂಡಿಕೆದಾರ ಸಮ್ಮೇಳನ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಮುಂದಿನ ಜನವರಿಗೆ ಬಂಡವಾಳ ಹೂಡಿಕೆದಾರ ಸಮ್ಮೇಳನ ನಡೆಸುವ ಪ್ರಸ್ತಾಪ ಇದೆ ಎಂದು ತಿಳಿಸಿದರು.
ಕೈಗಾರಿಕಾ ಪ್ರದೇಶಕ್ಕೆ ಭೇಟಿ:
ಕೈಗಾರಿಕೆಗಳ ಸಮಸ್ಯೆ ಬಗ್ಗೆ ಕೈಗರಿಕಾ ಪ್ರದೇಶಗಳಿಗೆ ನಾನೇ ಹೋಗಿ ತಪಾಸಣೆ ಮಾಡುತ್ತೇನೆ ಎಂದು ಶೆಟ್ಟರ್ ತಿಳಿಸಿದರು. ಅಲ್ಲಿನ ಸಮಸ್ಯೆಗಳ ಬಗ್ಗೆ ನಾವು ಉದ್ಯಮಿಗಳ ಜತೆ ಸಮಾಲೋಚನೆ ನಡೆಸಿ, ಪರಿಹಾರ ಹುಡುಕುವ ಕೆಲಸ ಮಾಡುತ್ತೇನೆ ಎಂದು ವಿವರಿಸಿದರು. ಸರ್ಕಾರ ರಚನೆಯಾಗಿ ಒಂದು ತಿಂಗಳಾಗದೆಯಷ್ಟೇ. ನಾನು ಇಲಾಖೆ ವಹಿಸಿಕೊಂಡು ಒಂದು ವಾರ ಆಗಿದೆ. ಜಿಂದಾಲ್ ವಿಚಾರದಲ್ಲಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ವಿಳಂಬ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.