ಬೆಂಗಳೂರು : ಜಲಸಂಪನ್ಮೂಲ ಇಲಾಖೆಯ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಪ್ರಮುಖವಾಗಿ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಬೇಕು. ಶೀಘ್ರ ಕಾಮಗಾರಿಗಳನ್ನು ಮುಗಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ನೀರಾವರಿ ನಿಗಮದಲ್ಲಿ ಇಂದು ನಡೆದ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯ ನಿಗಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷ್ಣಾ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಗಳಡಿ ಅನುಷ್ಠಾನಗೊಳಿಸುತ್ತಿರುವ ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ, ಮಹಾದಾಯಿ ಕಣಿವೆಯ ಕಳಸಾ ಮತ್ತು ಬಂಡೂರು ನಾಲಾ ತಿರುವು ಯೋಜನೆಗಳ, ನವಲಿ ಸಮತೋಲನ ಜಲಾಶಯ ನಿರ್ಮಾಣ ಯೋಜನಾ ಕಾಮಗಾರಿಗಳ ಪ್ರಸ್ತುತ ಹಂತದ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವಿವರಗಳನ್ನು ಚರ್ಚಿಸಿದರು.
ಮೇಕೆದಾಟು ಯೋಜನೆಯ ಪ್ರಸ್ತುತ ಹಂತದ ವಿವರಗಳನ್ನು ಹಾಗೂ ಕಾನೂನಾತ್ಮಕ ಕ್ರಮಗಳ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖವಾಗಿ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಿ. ಈ ನಿಟ್ಟಿನಲ್ಲಿ ಅಗತ್ಯ ಭೂಸ್ವಾಧೀನ ಪ್ರಕರಣಗಳಿಗೆ ಆದ್ಯತೆ ಮೇಲೆ ಭೂ ಪರಿಹಾರ ನೀಡುವ ನಿಟ್ಟಿನಲ್ಲಿ ನಿಗಮಗಳಡಿ ಸೂಕ್ತ corpus fund ಸ್ಥಾಪಿಸುವ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಭೂಸ್ವಾಧೀನತೆ ಪ್ರಕ್ರಿಯೆಯನ್ನು ತೀವ್ರಗತಿಯಲ್ಲಿ ಜರುಗಿಸಲು ಪ್ರಮುಖವಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಮತ್ತು ಇತರ ಸಂಬಂಧಿತ ಅನೇಕ ಅಧಿಕಾರಿ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತಾಗಿ ಸರ್ಕಾರದ ಅನುಮೋನದೆಗಾಗಿ ಪ್ರತ್ಯೇಕ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು. ನಿಗಮಗಳಡಿ ಅನುಷ್ಠಾನಗೊಳಿಸುತ್ತಿರುವ ಅನೇಕ ಕೆರೆ ತುಂಬಿಸುವ ಯೋಜನೆಗಳು ಮತ್ತು ಏತ ನೀರಾವರಿ ಯೋಜನೆಗಳ ಸಫಲತೆ ಕುರಿತಾಗಿ ಯೋಜನೆಗಳ ಮೌಲ್ಯಮಾಪನ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ಆದೇಶಿಸಿದರು.
ನಿಗಮಗಳಡಿ ನೀರಾವರಿ ಯೋಜನೆಗಳ ಅನುಷ್ಠಾನದ ಜೊತೆಗೆ ಪಾಲನೆ ಮತ್ತು ಪೋಷಣೆ ಜವಾಬ್ದಾರಿ ಹೊಂದಿದ್ದು, ನಿಗಮಗಳ ವ್ಯಾಪ್ತಿಯ ಅನೇಕ ವಿಭಾಗ ಮತ್ತು ಉಪ ವಿಭಾಗಗಳಡಿ ತಾಂತ್ರಿಕ ಸಿಬ್ಬಂದಿಯ ಕೊರತೆ (ಸಹಾಯಕ ಇಂಜಿನಿಯರ್ / ಕಿರಿಯ ಇಂಜಿನಿಯರ್) ಇರುವುದರ ಬಗ್ಗೆ ಚರ್ಚಿಸಲ್ಪಟ್ಟು ಪ್ರಸ್ತುತ ನಿಗಮಗಳ ಹಂತದಲ್ಲಿ ಯೋಜನಾವಾರು ಅಧೀಕ್ಷಕ ಅಭಿಯಂತರರುಗಳ ವ್ಯಾಪ್ತಿಯಲ್ಲಿನ ವಿಭಾಗ/ಉಪವಿಭಾಗಗಳಡಿ ಖಾಲಿ ಇರುವ ಮಂಜೂರಾದ ಹುದ್ದೆಗೆ ಎದುರಾಗಿ ಅಲ್ಲಿಯ ಯೋಜನೆಗಳಿಗೆ trainee Engineerಗಳ ನೇಮಕಾತಿ ಬಗ್ಗೆ ಪರಿಶೀಲಿಸಿ ನಿಗಮಗಳ ಮಂಡಳಿ ಸಭೆಯಲ್ಲಿ ಪ್ರಸ್ತಾವನೆಗಳನ್ನು ಮಂಡಿಸಲು ಸೂಚಿಸಿದರು.