ಬೆಂಗಳೂರು: ಕರ್ನಾಟಕ ರಾಜ್ಯ ಯುವನೀತಿ-2022 ರ ಕರಡನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಬಿಡುಗಡೆಗೊಳಿಸಿದರು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಯುವ ನೀತಿ ರಚನಾ ಸಮಿತಿಯ ಅಧ್ಯಕ್ಷರಾದ ಡಾ.ಆರ್.ಬಾಲಸುಬ್ರಹ್ಮಣ್ಯಂ ಸಿದ್ಧಪಡಿಸಿರುವ ಕರಡನ್ನು ಸಚಿವರು ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಸಚಿವ ಡಾ.ನಾರಾಯಣಗೌಡ, ಯುವಜನತೆ ದೇಶದ ಭವಿಷ್ಯ. ಹಾಗಾಗಿ, ಯುವ ಜನತೆಯ ಉತ್ತಮ ಭವಿಷ್ಯ ರೂಪಿಸುವುದು ಅಗತ್ಯವಿದೆ. ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ನೀತಿ 2022ನ್ನು ರೂಪಿಸಲು ಡಾ.ಆರ್ ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದ ಸಮಿತಿ ರಚಿಸಲಾಗಿತ್ತು. ಸಮಿತಿಯ ಸದಸ್ಯರು ರಾಜ್ಯಾದ್ಯಂತ ಸಂಚರಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ, ಹಲವು ರಾಜ್ಯ, ಹಲವು ದೇಶಗಳ ಯುವ ಸಂಬಂಧಿತ ಚಟುವಟಿಕೆಗಳನ್ನು ಅಧ್ಯಯನ ನಡೆಸಿ ವರದಿ ಸಿದ್ದಪಡಿಸಿದ್ದಾರೆ. ಇಂದಿನಿಂದ ಯುವ ನೀತಿ ಕರಡು ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. 10 ದಿನಗಳ ಕಾಲಾವಕಾಶ ನೀಡಲಾಗಿದ್ದು, ಸಾರ್ವಜನಿಕರ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಅಂತಿಮ ವರದಿಯನ್ನು ನೀಡಲಿದೆ. ಅಂತಿಮ ವರದಿಯನ್ನು ನೀಡಿದ ಕೂಡಲೇ ಸಚಿವ ಸಂಪುಟದಲ್ಲಿ ತಂದು ಅನುಮೋದನೆ ಕೊಡಿಸಲಾಗುತ್ತದೆ ಎಂದು ಹೇಳಿದರು.
ಯುವ ನೀತಿ ಕರಡಿನಲ್ಲಿ ಮುಖ್ಯವಾಗಿ ಯುವ ಜನರಿಗಾಗಿ ಶಿಕ್ಷಣ ಮತ್ತು ತರಬೇತಿ, ಉದ್ಯೋಗ ಮತ್ತು ಉದ್ಯಮಶೀಲತೆ, ಆರೋಗ್ಯ, ಕ್ರೀಡೆ, ಯುವ ಆಯವ್ಯಯ, ಯುವ ಸಬಲೀಕರಣ ಇಲಾಖೆಯ ಪುನರಾಚನೆ ಹಾಗೂ ಯುವ ಕಾರ್ಯಕ್ರಮಗಳ ಮೌಲ್ಯಮಾಪನವನ್ನು ಒಳಗೊಂಡಿದೆ. ರಾಜ್ಯದ ಜನಸಂಖ್ಯೆಯ ಶೇ.30 ರಷ್ಟಿರುವ ಯುವ ಸಮೂಹವನ್ನು ಸಮಗ್ರವಾಗಿ ಹಾಗೂ ಸಂಸ್ಕಾರಯುತವಾಗಿ ಅಭಿವೃದ್ಧಿಗೊಳಿಸುವ ಗುರಿಯನ್ನು ಕರಡಿನಲ್ಲಿ ಅಳವಡಿಸಲಾಗಿದೆ. ಆನ್‌ಲೈನ್ ಸೇರಿದಂತೆ ಹಲವು ಹಂತಗಳಲ್ಲಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕರಡು ಬಗ್ಗೆ ಬರುವ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಸ್ವೀಕರಿಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುತ್ತದೆ. ಭಾರತ ಸರ್ಕಾರದ ಯುವ ನೀತಿಯ ಡ್ರಾಫ್ಟ್ ಕೂಡ ಪಬ್ಲಿಕ್ ಡೊಮೇನ್‌ನಲ್ಲಿದೆ. ಅದನ್ನು ಕೂಡ ಅಧ್ಯಯನ ನಡೆಸಲಾಗಿದ್ದು, ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಕೇಂದ್ರ ಸರ್ಕಾರಕ್ಕೂ ಮುಂಚಿತವಾಗಿಯೇ ನಮ್ಮ ಯುವ ನೀತಿ ಬಿಡುಗಡೆಯಾಗಲಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ಆರ್ ಬಾಲಸುಬ್ರಹ್ಮಣ್ಯಂ ಅವರು ತಿಳಿಸಿದರು.
ಈ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ರಾಜೇಂದರ್ ಕುಮಾರ್ ಕಟಾರಿಯಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಹಾಗೂ ಯುವ ನೀತಿ ರಚನಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಸವದಿ, ಕತ್ತಿ, ಜಾರಕಿಹೊಳಿ ಬ್ರದರ್ಸ್ ಭಿನ್ನರಾಗ: ನಿರಾಣಿ, ಶಹಾಪುರಗೆ ಹೆಚ್ಚಿದ ಆತಂಕ