ಬೆಂಗಳೂರು: ಅನ್ನ, ಆಹಾರ ಮತ್ತು ಆರೋಗ್ಯವನ್ನು ಮಾರಾಟ ಮಾಡಬಾರದು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಮತ್ತು ಅದನ್ನು ಜಗತ್ತಿಗೆ ಸಾರಿರುವ ದೇಶ ಭಾರತ. ದುರಾದೃಷ್ಟವಷಾತ್, ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ದೇಶದ ಪ್ರತಿಯೊಂದು ಸೇವೆ, ಕಾರ್ಯಗಳು ವ್ಯಾಪಾರೀಕರಣಗೊಂಡವು. ಅದಕ್ಕೆ ಶಿಕ್ಷಣವೂ ಹೊರತಾಗಲಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಉಪ ಕ್ರಮದಡಿ, ಇಂಡಿಯನ್ ಅಕಾಡೆಮಿ ಸಮೂಹ ವಿದ್ಯಾಸಂಸ್ಥೆಯಿಂದ ನವೀಕರಣಗೊಂಡಿರುವ ಬಿಬಿಎಂಪಿ ಮತ್ತು ಸರ್ಕಾರದ ಐದು ಶಾಲೆಗಳನ್ನು ಬೆಂಗಳೂರಿನ ತಿಮ್ಮಯ್ಯ ರಸ್ತೆಯಲ್ಲಿರುವ ಕಾರ್ಪೊರೇಷನ್ ಶಾಲೆಯಲ್ಲಿ ನಡೆದ ಕಾರ್ಯಕ್ರಮಲ್ಲಿ ಉದ್ಘಾಟಿಸಿ ಮಾತನಾಡಿದ ಸಚಿವ ನಾಗೇಶ್, ಸ್ವಾವಲಂಬಿ, ಸ್ವಾಭಿಮಾನಿ ಶಿಕ್ಷಣ ನೀಡುವ ಭಾರತದ ಶಿಕ್ಷಣ ಪದ್ಧತಿಯನ್ನು ಹಾಳು ಮಾಡಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಭಾರತೀಯರನ್ನು ಬಳಸಿಕೊಳ್ಳುವ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಬ್ರಿಟಿಷರು ಜಾರಿಗೊಳಿಸಿದರು. ಇದರಿಂದ ಭಾರತ ಇಂದಿಗೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ವಿದೇಶಿ ಸೇವಕರ ಮನಸ್ಥಿತಿಯಲ್ಲೇ ಬದುಕುವುದನ್ನು ಬದಲಿಸಲು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರ್ಕಾರ ನಿರ್ಧಾರ: ಸಚಿವ ಬಿ.ಸಿ ನಾಗೇಶ್
ಸ್ವಾವಲಂಬಿ, ಸ್ವಾಭಿಮಾನಿ ಜೀವನ ನಡೆಸಲು ದಿಕ್ಕು ತೋರಿಸುವ ಶಿಕ್ಷಣ ನೀಡಬೇಕು ಎಂದು ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ಹಿರಿಯರು ಕಂಡ ಕನಸು ನನಸು ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯ ರಾಷ್ಟ್ರೀಯ ಶಿಕ್ಷಣ ನೀತಿ - 2020 ನ್ನು ಜಾರಿಗೆ ತರುತ್ತಿದ್ದಾರೆ. ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಸೇರಿದಂತೆ ದೇಶದ ಅನೇಕ ಮಹನೀಯರು ಕಂಡ ಕನಸಿನ ಶಿಕ್ಷಣವನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನಿಸುತ್ತಿದ್ದಾರೆ. ಸರ್ವರಿಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಎನ್‌ಇಪಿ ಮೂಲಕ ಸುಧಾರಣೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಉದ್ಯಮಿಗಳು ಕೈ ಜೋಡಿಸುತ್ತಿದ್ದಾರೆ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನೇಕ ಸಂಸ್ಥೆಗಳು, ಉದ್ಯಮಿಗಳು ಕೈಜೋಡಿಸುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಸುಧಾರಣೆ ಸಲಹೆಗಾರರಾದ ಡಾ. ಎಂ.ಆರ್. ದೊರೆಸ್ವಾಮಿ ಪ್ರಯತ್ನ ಉತ್ತಮವಾದದ್ದು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಂಡಿಯನ್ ಅಕಾಡೆಮಿ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಸೋಮಶೇಖರ್ ನೆರವಾಗಿರುವುದು ಶ್ಲಾಘನೀಯ. ಶಾಲೆಗಳ ಅಭಿವೃದ್ಧಿಯಲ್ಲಿ ಸಂಘ-ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳ ಸಹಕಾರ ಸಾರ್ಥಕವಾಗಬೇಕೆಂದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕು. ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘ-ಸಂಸ್ಥೆಗಳು ಮುಂದೆ ಬರಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕರಿಸಿ, ಕನ್ನಡ ಉಳಿಸಿ: ವಾಟಾಳ್ ನಾಗರಾಜ್
ಸಮಾಜದ ಕಟ್ಟ ಕಡೆಯ ಮನುಷ್ಯನ ಶ್ರೇಯಸ್ಸಿಗೆ ಕೆಲಸ: ಸಮಾಜದ ಕಟ್ಟ ಕಡೆಯ ಮನುಷ್ಯನ ಅಭಿವೃದ್ಧಿಗೆ, ಶ್ರೇಯಸ್ಸಿಗೆ ಕೆಲಸ ಮಾಡಬೇಕು ಎಂದು ದೀನ ದಯಾಳ್ ಉಪಾಧ್ಯಾಯ ಹೇಳುತ್ತಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಗಳಾಗಿದ್ದ ಅವಧಿಯಲ್ಲಿ ಸರ್ವ ಶಿಕ್ಷಣ ಅಭಿಯಾನದ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಶಾಲೆಗಳ ನಿರ್ಮಾಣ, ಶೌಚಗೃಹ, ನೀರಿನ ಸಂಪರ್ಕ ಕಲ್ಪಿಸಿದರು. ನಮ್ಮ ಸರ್ಕಾರವೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ, ಅಗತ್ಯತೆ ಅನುಸಾರ ಮೂಲಸೌಕರ್ಯ ಉತ್ತಮಗೊಳಿಸಲು 8,100 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ನುಡಿದರು.
ಶೌಚಗೃಹಗಳ ನಿರ್ಮಾಣಕ್ಕೆ 250 ಕೋಟಿ ಅನುದಾನ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೌಚಗೃಹಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 250 ಕೋಟಿ ರೂ ಅನುದಾನ ಘೋಷಿಸಿದ್ದಾರೆ. ಶೌಚಗೃಹ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಅವುಗಳ ನಿರ್ವಹಣೆಯಲ್ಲಿ ಸಮಸ್ಯೆ ಇದೆ. ಶೌಚಗೃಹಗಳ ಸ್ವಚ್ಛತೆಗೆ ಪ್ರತಿಯೊಬ್ಬರೂ ಮಹತ್ವ ನೀಡಬೇಕಿದೆ. ಮಕ್ಕಳಿಗೆ ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಮನೆಯಲ್ಲಿ ಪಾಲಕರು ತಿಳಿವಳಿಕೆ ನೀಡಬೇಕು ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಶಿಕ್ಷಣ ಸುಧಾರಣೆ ಸಲಹೆಗಾರರಾದ ಡಾ. ಎಂ.ಆರ್. ದೊರೆಸ್ವಾಮಿ, ಇಂಡಿಯನ್ ಅಕಾಡೆಮಿ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಡಾ.ಟಿ. ಸೋಮಶೇಖರ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಶಾಲೆಗಳಲ್ಲಿ ನಮಾಜ್ ಮಾಡುವ ಹಕ್ಕನ್ನು ಸರ್ಕಾರ ಕೊಟ್ಟಿಲ್ಲ: ಸಚಿವ ಬಿ ಸಿ ನಾಗೇಶ್