ಬೆಂಗಳೂರು: ಮದರಸಾಗಳಿಗೆ ಹೋಗುವ ಮಕ್ಕಳಿಗೆ ನೀಡಲಾಗುತ್ತಿರುವ ಔಪಚಾರಿಕ ಶಿಕ್ಷಣದ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಮದರಸಾಗಳಲ್ಲಿ ಹಾಲಿ ನೀಡಲಾಗುತ್ತಿರುವ ಶಿಕ್ಷಣದ ಸ್ವರೂಪದ ಕುರಿತು ವರದಿ ಪಡೆದುಕೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ತಿಳಿಸಿದರು.
ಔಪಚಾರಿಕ ಶಿಕ್ಷಣದ ಮಾಹಿತಿ: ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಅವರು ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಸಚಿವರು ಮಾತನಾಡಿ, ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದ ಬಳಿಕ ವಿಜ್ಞಾನ ಮತ್ತು ಗಣಿತ ಕುರಿತು ಔಪಚಾರಿಕ ಶಿಕ್ಷಣ ಪಡೆಯಲು ಹತ್ತಿರದ ಶಾಲೆಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕು ಎಂಬ ನಿಯಮವಿದೆ. ಆದರೆ, ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ಯಾವ ಪ್ರಮಾಣದಲ್ಲಿ ಔಪಚಾರಿಕ ಶಿಕ್ಷಣ ಪಡೆಯುತ್ತಿದ್ದಾರೆಂಬ ಸ್ಪಷ್ಟ ಮತ್ತು ನಿಖರ ಮಾಹಿತಿ ಲಭ್ಯವಿಲ್ಲ.
ಶಿಕ್ಷಣದ ಸ್ವರೂಪ ತಿಳಿಯುವುದು ಅಗತ್ಯ: ಈ ಹಿನ್ನೆಲೆಯಲ್ಲಿ ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯದಲ್ಲಿರುವ ಮದರಸಾಗಳಲ್ಲಿನ ಶಿಕ್ಷಣದ ಸ್ವರೂಪ ತಿಳಿಯುವ ಅಗತ್ಯವಿದೆ. ಮದರಸಾಗಳಿಗೆ ಹೋಗುವ ಮಕ್ಕಳಿಗೆ ಔಪಚಾರಿಕ ಶಿಕ್ಷಣ ಸಿಗುತ್ತಿಲ್ಲ. ಮುಖ್ಯವಾಗಿ ಗಣಿತ ಮತ್ತು ವಿಜ್ಞಾನದ ಕುರಿತು ಬೋಧನೆ ದೊರೆಯುವಂತೆ ಮಾಡಬೇಕು ಎಂದು ಪಾಲಕರು ಒತ್ತಾಯಿಸಿದ್ದರು.
ಇದನ್ನೂ ಓದಿ: ಶಾಲೆಗಳಲ್ಲಿ ನಮಾಜ್ ಮಾಡುವ ಹಕ್ಕನ್ನು ಸರ್ಕಾರ ಕೊಟ್ಟಿಲ್ಲ: ಸಚಿವ ಬಿ ಸಿ ನಾಗೇಶ್
ಹೀಗಾಗಿ, ಮದರಸಾಗಳಲ್ಲಿ ನೀಡುತ್ತಿರುವ ಶಿಕ್ಷಣದ ವ್ಯವಸ್ಥೆ ಕುರಿತು ಪರಿಶೀಲಿಸಲು ಮೊದಲ ಸಭೆಯನ್ನು ಬುಧವಾರ ನಡೆಸಲಾಗಿದೆ. ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ಮದರಸಾಗಳಲ್ಲಿ ‘ಶಿಕ್ಷಣ ಹಕ್ಕು ಕಾಯ್ದೆ’ ಪ್ರಕಾರ ಸಿಗಬೇಕಾಗ ಶಿಕ್ಷಣ ಸಿಗುತ್ತಿದೆಯೇ? ಇಲ್ಲವಾದರೆ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ? ಎಂಬ ಕುರಿತು ಮದರಾಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ: ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆಗೆಂದು ಮದರಸಾಗಳಿಗೆ ತೆರಳಿದಾಗ ಸಹಕರಿಸುವುದಿಲ್ಲ ಎಂಬ ದೂರುಗಳು ಇಲಾಖೆಗೆ ಬಂದಿವೆ. ಹೀಗಾಗಿ, ಕೆಲವು ಮದರಸಾಗಳಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಥಿತಿಗತಿ ಬಗ್ಗೆ ಮಾಹಿತಿ ತೆಗೆದುಕೊಂಡ ನಂತರ ಶಿಕ್ಷಣ ತಜ್ಞರು, ಮದರಸಾ ನಡೆಸುತ್ತಿರುವವರ ಜೊತೆ ಸಭೆ ನಡೆಸಲಾಗುತ್ತದೆ.
ಆರ್‌ಟಿಇ ಪ್ರಕಾರ, ಎಲ್ಲ ಮಕ್ಕಳಿಗೆ ಗುಣಮಟ್ಟದ ಔಪಚಾರಿಕ ಶಿಕ್ಷಣ ನೀಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಅದನ್ನು ನಿರ್ವಹಿಸಲು ಪ್ರಯತ್ನಿಸಲಾಗುತ್ತದೆ. ಒಟ್ಟಾರೆಯಾಗಿ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ನುಡಿದರು.