ಬೆಂಗಳೂರು: ಟಿಪ್ಪು ಸಲಾಂ ಆರತಿ ರದ್ದುಗೊಳಿಸುವ ಬಗ್ಗೆ ಸ್ಥಳೀಯರಿಂದ ಅರ್ಜಿ ಬಂದರೆ ಪರಿಶೀಲನೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಶೃಂಗೇರಿಯಲ್ಲಿ ಸಲಾಂ ಆರತಿ ಬಗ್ಗೆ ಚರ್ಚೆ ಶುರುವಾಗಿದೆ. ಟಿಪ್ಪು ಆರತಿಗೆ ಅಲ್ಲಿಯ ಜನರ ವಿರೋಧ ಬಂದರೆ ಅದನ್ನೂ ನಿಲ್ಲಿಸುತ್ತೇವೆ ಎಂದಿದ್ದಾರೆ.
ಆದರೆ, ಈವರೆಗೆ ಯಾವುದೇ ಅರ್ಜಿ ಬಂದಿಲ್ಲ. ಸ್ಥಳೀಯರು ಈ ಬಗ್ಗೆ ಬೇಡಿಕೆ ಇಟ್ಟರೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪುವಿನ ಹೆಸರಿನಲ್ಲಿ ಪ್ರತೀ ದಿನ ನಡೆಯುತ್ತಿರುವ ಸಲಾಂ ಮಹಾಮಂಗಳಾರತಿಯ ಹೆಸರನ್ನು ತೆಗೆಸಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿತ್ತು. ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ 1765ರಿಂದ 1795ರ ನಡುವೆ ಟಿಪ್ಪು ಸುಲ್ತಾನ್ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ಎಂದು ಹೇಳಲಾಗುತ್ತಿದೆ.
ದೇವಿಯ ದರ್ಶನ ಮಾಡುವಾಗ ಮೂಲ ವಿಗ್ರಹಗಳು ಟಿಪ್ಪು ಸುಲ್ತಾನನಿಗೆ ಸ್ಪಷ್ಟವಾಗಿ ಕಾಣಿಸಲಿಲ್ಲ. ಅಂತೂ ದರ್ಶನ ಮಾಡಿದ ಬಳಿಕ ದೇವಿಯನ್ನು ಕಣ್ತುಂಬಿಕೊಂಡು, ಟಿಪ್ಪು ಬಣ್ಣಿಸಿದ ಎನ್ನುವ ಮೌಖಿಕ ಇತಿಹಾಸ ಇಂದಿಗೂ ಚಾಲ್ತಿಯಲ್ಲಿದೆ.
ಇದನ್ನೂ ಓದಿ: ಟಿಪ್ಪು, ತಾಳಗುಪ್ಪ ಎಕ್ಸ್ಪ್ರೆಸ್ ರೈಲುಗಳ ಹೆಸರು ಬದಲಾವಣೆ: ಶುಕ್ರವಾರದ ಶುಭಸುದ್ದಿ ಎಂದ ಸಂಸದ ಪ್ರತಾಪ್ ಸಿಂಹ