ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟು ಜನರ ಮೇಲಿನ ಕೇಸ್ಗಳನ್ನು ವಾಪಸ್ ತೆಗೆದುಕೊಂಡರು. ಅದರ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಕೆ. ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ಎಷ್ಟು ಜನರನ್ನು ಅರೆಸ್ಟ್ ಮಾಡಿದ್ದೇವೆ. ಇದು ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಆಗುತ್ತಿತ್ತಾ? ಎಂದರು.
ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಹಾಗೂ ಹುಬ್ಬಳ್ಳಿ ಗಲಭೆಗೆ ಸಾಮ್ಯತೆ ಇದೆ. ಪೊಲೀಸರು ಸ್ವಲ್ಪ ವೀಕ್ ಆಗಿದ್ರೆ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಸಾಕಷ್ಟು ವಿಚಾರಣೆ ಆಗಬೇಕು. ಇದರ ಹಿಂದೆ ಇರುವ ದೇಶದ್ರೋಹಿ ಸಂಘಟನೆಗಳು ಹೊರಬರಬೇಕು. ತಪ್ಪಿತಸ್ಥರು ಅಲ್ಲದೇ ಇರುವವರನ್ನು ಬಂಧನ ಮಾಡುವ ಅವಶ್ಯಕತೆ ಇಲ್ಲ ಎಂದರು.
ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಣ್ಣ ದಾಖಲಾತಿ ಸಿಕ್ಕ ಎರಡು ಮೂರು ಗಂಟೆಯೊಳಗೆ ಸಿಎಂ ಅನುಮತಿ ಪಡೆದು ಸಿಐಡಿ ಟೀಂ ಮಾಡಿದ್ದೇವೆ. ಎಲ್ಲವನ್ನೂ ಬಗೆದು, ಬೇರುಸಹಿತ ಕಿತ್ತು ಹೊರ ತರಬೇಕು ಎಂದು ಹೇಳಿದ್ದೇವೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತೆ ದಿವ್ಯಾ ಹಾಗರಗಿ ಬಂಧಿಸದ ವಿಚಾರವಾಗಿ ಮಾತನಾಡಿ, ಅವರನ್ನು ಹಿಡಿಯದೆ ಬಿಟ್ರೆ ಅದು ವೈಫಲ್ಯ. ನಾನೇ ಪ್ರಕರಣವನ್ನು ಸಿಐಡಿಗೆ ಕೊಟ್ಟಿದ್ದು. ಎಲ್ಲಿದ್ರೂ ಅರೆಸ್ಟ್ ಮಾಡ್ತಾರೆ. ಅವರು ನಿನ್ನೆ ಕೋರ್ಟ್ಗೆ ಹೋಗಿದ್ರು, ಬೇಲ್ ಸಿಕ್ಕಿಲ್ಲ ಎನ್ನುವ ಮಾಹಿತಿ ಇದೆ. ಅವರಿಗೊಂದು ಇವರಿಗೊಂದು ಇಲ್ಲ, ನಮ್ಮ ಆಡಳಿತದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದು ತಿಳಿಸಿದರು.
ಇದನ್ನೂ ಓದಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ 'ಆರಟ' ಸೇವೆಯೊಂದಿಗೆ ತೆರೆ