ಬೆಂಗಳೂರು: ನಗರದಲ್ಲಿ ಮೇ 16ರಿಂದ 22ರವರೆಗೆ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ಮೂಲಕ ಯುವಕರಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಕ್ರೀಡೆಗೆ ಪ್ರೋತ್ಸಾಹ ನೀಡಲು ಇಂತಹ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಎರಡನೇ ಬಾರಿಗೆ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಯಾಗುತ್ತಿದೆ. 14 ವಯಸ್ಸಿನೊಳಗಿನ ಒಟ್ಟು 5 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ. ಅಥ್ಲೆಟಿಕ್ಸ್, ಅರ್ಚರಿ, ಬ್ಯಾಟ್ ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಭಾಲ್, ಜಿಮ್ನಾಸ್ಟಿಕ್ಸ್, ಹ್ಯಾಂಡ್ ಬಾಲ್, ಹಾಕಿ, ಜೂಡೋ, ಖೋಖೋ, ಲಾನ್ ಟೆನ್ನಿಸ್, ನೆಟ್ ಬಾಲ್, ರೈಫಲ್ ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನ್ನಿಸ್, ಟೇಕ್ವಾಂಡೋ, ವೇಟ್ ಲಿಫ್ಟಿಂಗ್ ಸ್ಫರ್ಧೆಗಳು ಸೇರಿದಂತೆ ಮಿನಿ ಒಲಿಂಪಿಕ್ನಲ್ಲಿ ಒಟ್ಟು 21 ಕ್ರೀಡಾ ಸ್ಫರ್ಧೆಗಳು ಇರಲಿವೆ ಎಂದರು.
ಮೇ 16ರಂದು ಸಂಜೆ 5 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಿನಿ ಒಲಿಂಪಿಕ್ಸ್ಗೆ ಚಾಲನೆ ನೀಡಲಿದ್ದಾರೆ. ರಾಜ್ಯ ಸರ್ಕಾರದಿಂದ ಮಿನಿ ಒಲಿಂಪಿಕ್ಸ್ಗೆ 2.5 ಕೋಟಿ ರೂ. ನೀಡಿದೆ. ಎಲ್ಲಾ ಕ್ರೀಡಾಕೂಟ ಕಂಠೀರವ ಕ್ರೀಡಾಂಗಣದಲ್ಲೇ ನಡೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ: ಸಂಪುಟ ಸರ್ಕಸ್.. ಸಿಎಂ-ಶಾ ಭೇಟಿ ಅಂತ್ಯ, ಬರಿಗೈಯಲ್ಲೇ ರಾಜ್ಯಕ್ಕೆ ಬೊಮ್ಮಾಯಿ ವಾಪಸ್