ಬೆಂಗಳೂರು: ಶುಕ್ರವಾರದಿಂದ ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ನಡೆಯಲಿದೆ. ರಾಜ್ಯದ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಂಪರ್ಕವನ್ನು ಕಲ್ಪಿಸಲು ಮತ್ತು ರೈತರು ಖರೀದಿದಾರರು, ಮಾರಾಟಗಾರರು, ರಫ್ತುದಾರರಿಗೆ ವಿಪುಲ ಅವಕಾಶಗಳನ್ನು ಒದಗಿಸಲು ಈ ಮೇಳೆ ಆಯೋಜನೆ ಮಾಡಿದ್ದು, ರಾಜ್ಯ ಹಾಗೂ ಹೊರರಾಜ್ಯಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ.
ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಾಳೆ (ಜ. 5ರಂದು )ಬೆಳಗ್ಗೆ 11 ಗಂಟೆಗೆ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2024ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿಲಿದ್ದಾರೆ. ರಾಜ್ಯದ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಂಪರ್ಕವನ್ನು ಕಲ್ಪಿಸಲು ಮತ್ತು ರೈತರು ಖರೀದಿದಾರರು, ಮಾರಾಟಗಾರರು, ರಫ್ತುದಾರರಿಗೆ ವಿಪುಲ ಅವಕಾಶಗಳನ್ನು ಒದಗಿಸಲು ಕೃಷಿ ಇಲಾಖೆ ಆಯೋಜನೆ ಮಾಡಿರುವ ಮೇಳ ಜನವರಿ 7 ರವರೆಗೆ ನಡೆಯಲಿದೆ.
ವಾಣಿಜ್ಯ ಮೇಳದ ಮಾಹಿತಿ: ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ. ಮೇಳದಲ್ಲಿ ಉತ್ತರ ಪ್ರದೇಶ, ಪಂಜಾಬ್, ಆಂಧ್ರ ಪ್ರದೇಶ, ಮಹಾರಾಷ್ಟ್ರ ಒಡಿಶಾ, ತಮಿಳುನಾಡು ಮತ್ತು ಮೇಘಾಲಯ ಮುಂತಾದ ರಾಜ್ಯಗಳು ಭಾಗವಹಿಸುತ್ತಿವೆ.
ವಸ್ತು ಪ್ರದರ್ಶನದಲ್ಲಿ 281 ಮಳಿಗೆಗಳು ಇರಲಿವೆ. ಸಿರಿಧಾನ್ಯ / ಸಾವಯವ ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಮಳಿಗೆಗಳು ಸೇರಿದಂತೆ ಒಟ್ಟು 81 ಮಳಿಗೆಗಳು ಇರಲಿವೆ. ಉತ್ಪಾದಕರು- ಮಾರುಕಟ್ಟೆಗಾರರ ಸಭೆ, ಅಂತಾರಾಷ್ಟ್ರೀಯ ಸಮ್ಮೇಳನ, ರೈತರ ಕಾರ್ಯಾಗಾರ ಇರಲಿದ್ದು, ಸಿರಿಧಾನ್ಯದ ಫುಡ್ ಕೋರ್ಟ್ ವಿಶೇಷ ಆಕರ್ಷಣೆಯಾಗಿರಲಿದೆ.
ಅಮೆರಿಕ, ಆಸ್ಟ್ರೇಲಿಯಾ, ಯುಎಇ, ಕೆನಡಾ, ಕತಾರ್, ಥೈಲ್ಯಾಂಡ್, ಸಿಂಗಾಪುರ ಮುಂತಾದವು ಸಿರಿಧಾನ್ಯಗಳ ಪ್ರಮುಖ ರಫ್ತು ತಾಣಗಳಾಗಿವೆ. ರಫ್ತು, ಮಾಡಲಾಗುತ್ತಿರುವ ಜೋಳ, ಸಜ್ಜೆ, ರಾಗಿ ಮತ್ತು ಇತರೆ ಸಿರಿಧಾನ್ಯಗಳನ್ನು ಪ್ರಮುಖವಾಗಿ ಬಳ್ಳಾರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಹಾವೇರಿ, ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಪಡೆಯಲಾಗುತ್ತಿದೆ. ಇದರ ಬಗ್ಗೆಯೂ ಮೇಳದಲ್ಲಿ ಜಾಗೃತಿ ಮೂಡಿಸಿ ವಹಿವಾಟಿಗೆ ಮತ್ತಷ್ಟು ಉತ್ತೇಜನ ನೀಡುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ.
ಇದನ್ನೂ ಓದಿ: 40 ರೂ.ಗೆ 'ಕಾಟೇರ' ಲಿಂಕ್ ಶೇರ್: ಪೈರಸಿ ಆರೋಪಿ ಅರೆಸ್ಟ್