ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದರೂ ನಿಯಮ ಪಾಲನೆ ಕಡ್ಡಾಯ ಮಾಡಲಾಗಿದೆ. ಮೆಟ್ರೋ ಪ್ರಯಾಣಿಕರು ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆರು ಬೋಗಿಯ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದು, ಎಲ್ಲಾ ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಗುತ್ತಿದೆ. ಎಸ್ಕೇಲೇಟರ್ಗಳನ್ನು ಬಳಸುವಾಗಲೂ ಅಂತರ ಕಾಯ್ದು ಕೊಳ್ಳುವಂತೆ ಸೂಚಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಪ್ರಯಾಣಿಕರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಆಸನ ಮೀಸಲು:
ಕೋವಿಡ್ ಕಾರಣಕ್ಕೆ ಮೆಟ್ರೋ ಪ್ರಯಾಣಕ್ಕೆ ಹಿರಿಯ ನಾಗರಿಕರಿಗೆ ಅಗತ್ಯವಿದ್ದರಷ್ಟೇ ಪ್ರಯಾಣಿಸಲು ತಿಳಿಸಿರುವುದರಿಂದ 60 ವರ್ಷ ಮೇಲ್ಪಟ್ಟವರು ಹೊರಗಿನ ಓಡಾಟ ಕಡಿಮೆ ಮಾಡಿದ್ದಾರೆ. ಜನರು ಸಾಕಷ್ಟು ಪ್ರಜ್ಞೆ ಹೊಂದಿದ್ದು, ಹಿರಿಯ ನಾಗರಿಕರು ಬಂದಾಗ ಆಸನ ಬಿಟ್ಟು ಕೊಡುತ್ತಾರೆ. ಹಾಗೆಯೇ ಮಹಿಳೆಯರಿಗೆ ಪ್ರತ್ಯೇಕ ಬೋಗಿಯೇ ಇದ್ದು, ಅಲ್ಲಿ ಪುರುಷರಿಗೆ ಪ್ರವೇಶ ಇರೋದಿಲ್ಲ. ಹೀಗಾಗಿ ಲಾಕ್ಡೌನ್ ನಂತರ ಯಾವುದೇ ರೀತಿಯ ದಂಡ ವಿಧಿಸುವುದಾಗಲಿ ಮಾಡಿಲ್ಲ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್ಡೌನ್ ನಂತರ ತಾಂತ್ರಿಕ ತೊಂದರೆಯಿಂದ ಮೆಟ್ರೋ ಓಡಾಟ ನಿಂತಿಲ್ಲ:
ಲಾಕ್ ಡೌನ್ ನಂತರ ಮೆಟ್ರೋ ಓಡಾಟದಲ್ಲೂ ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾಗಿಲ್ಲ. ಬದಲಿಗೆ ಕಾಮಗಾರಿ ಕಾರ್ಯಕ್ಕಾಗಿ ವಾಣಿಜ್ಯ ಸಂಚಾರವನ್ನು ಸ್ಥಗಿತ ಮಾಡಿದ್ದೂ ಇದೆ. ನಮ್ಮ ಮೆಟ್ರೋ ಹಂತ-2ರ ಯಲಚೇಲನಹಳ್ಳಿಯಿಂದ ಅಂಜನಾಪುರದವರೆಗಿನ ರೈಲು ಮಾರ್ಗದಲ್ಲಿ ಪೂರ್ವ ಸಿದ್ಧತೆಯ ಕಾಮಗಾರಿ ಹಾಗೂ ಸಿಸ್ಟಂಗಳ ಪರೀಕ್ಷಾರ್ಥ ಮೆಟ್ರೋ ಓಡಾಟ ಕೆಲವು ನಿಲ್ದಾಣಗಳಲ್ಲಿ ಮಾತ್ರ ಸ್ಥಗಿತಗೊಂಡಿದೆ.
ಇದನ್ನೂ ಓದಿ: ಕೋವಿಡ್ನಿಂದ ಗುಣಮುಖ; ವಿಕ್ಟೋರಿಯಾ ಆಸ್ಪತ್ರೆಯಿಂದ ಶಶಿಕಲಾ ಬಿಡುಗಡೆ
ದುರಸ್ತಿ ಕಾಮಗಾರಿಯಿಂದ ವಾಣಿಜ್ಯ ಸಂಚಾರ ಸ್ಥಗಿತ:
ಜ.10 ರಂದು ಬನಶಂಕರಿ ಮತ್ತು ಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿ ಕಾರಣಕ್ಕೆ ನ್ಯಾಷನಲ್ ಕಾಲೇಜಿನಿಂದ ಯಲಚೇನಹಳ್ಳಿವವರೆಗೆ ವಾಣಿಜ್ಯ ಸಂಚಾರ ಸ್ಥಗಿತವಾಗಿತ್ತು. ಜ.31 ರಂದು ಟ್ರಿನಿಟಿ ಮತ್ತು ಹಲಸೂರು ಮೆಟ್ರೋ ನಿಲ್ದಾಣಗಳ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಎಂಜಿ ರೋಡ್ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರಗೆ ವಾಣಿಜ್ಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.