ಬೆಂಗಳೂರು: ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾರ್ಮಿಕ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ಪಟ್ಟಣಗೆರೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದೆ.
ಯರಪ್ಪ (53) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇವರು ಮೂಲತಃ ಆಂಧ್ರ ಪ್ರದೇಶದ ಶ್ರೀಕಾಕುಳಂನವರಾಗಿದ್ದು, ಐಎಲ್ ಮತ್ತು ಎಫ್‌ಎಸ್ ಸಂಸ್ಥೆ ಮೆಟ್ರೋ ಕಾಮಗಾರಿಯ ಗುತ್ತಿಗೆ ಪಡೆದಿದ್ದರು. ಈ ಸಂಸ್ಥೆಯಡಿ ಕೆಲಸಕ್ಕೆ ಸೇರಿದ್ದ ಯರಪ್ಪ ಎಸ್ಕಲೇಟರ್ ಕಾಮಗಾರಿಯಲ್ಲಿ ತೊಡಗಿದ್ದರು. ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಬಿಎಂಆರ್‌ಸಿಎಲ್ ಮತ್ತು ಗುತ್ತಿಗೆ ಪಡೆದ ಸಂಸ್ಥೆ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳದ ಪರಿಣಾಮ ಅವಘಡ ಸಂಭವಿಸಿದೆ ಎಂದು ಇತರೆ ಕಾರ್ಮಿಕರು ಆರೋಪಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೆಂಗೇರಿ ಪೊಲೀಸರು ತಿಳಿಸಿದ್ದಾರೆ.