ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಗತಿಪರ ಬಜೆಟ್ ಮಂಡಿಸಿದೆ. ರಾಜ್ಯ ಅಭಿವೃದ್ಧಿಯತ್ತ ಸಾಗುವ ಸೂಚನೆ ಸಿಕ್ಕಿದೆ ಎಂದು ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ ಅಭಿಪ್ರಾಯ ಪಟ್ಟಿದ್ದಾರೆ. ವಿಧಾನ ಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಅಭಿವೃದ್ಧಿ ನಿಲ್ಲಿಸಿತ್ತು. ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಹೆಚ್ಚಾಗಿದೆ. ಎಸ್ಸಿಪಿ, ಟಿಎಸ್ಪಿಗೆ ಕೊಂಚ ಅನುದಾನ ಹೆಚ್ಚಿಸಬೇಕು. ಸಿದ್ದರಾಮಯ್ಯ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ತಂದಿದ್ದ ಯೋಜನೆಗಳು ನಿಂತಿವೆ. ಅದೆಲ್ಲವೂ ಮತ್ತೆ ಚಾಲನೆಗೆ ಬರಬೇಕು. ಈ ಸರ್ಕಾರದ ಭಾಗ್ಯಗಳು ಉತ್ತಮ ಕೊಡುಗೆಯಾಗಿದ್ದು, ಬಿಜೆಪಿಯವರಿಗೆ ನಮ್ಮ ಕೆಲಸ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಬಳಿಕ ಕಾಂಗ್ರೆಸ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಜನರ ಅಭಿವೃದ್ಧಿ ಸರ್ಕಾರ ಮಾಡಬಹುದಾದ ನಿಜವಾದ ಅಭಿವೃದ್ಧಿ. ಕಾಂಗ್ರೆಸ್ ಸರ್ಕಾರ ಈ ಸಾರಿ ಬಜೆಟ್ನಲ್ಲಿ ಆ ಕೆಲಸ ಮಾಡಿದೆ. ಕಾಂಗ್ರೆಸ್ ಸರ್ಕಾರ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದೆ. ಸೂಜಿ ಸಹ ತಯಾರಿಸಲು ಆಗದ ದೇಶವನ್ನು ಇಂದು ಈ ಹಂತಕ್ಕೆ ತಂದು ನಿಲ್ಲಿಸಿದೆ. ನೆಹರು, ಇಂದಿರಾಗಾಂಧಿ ಜನರ ಕೈಗೆ ಹಣ ಸಿಗುವಂತೆ ಮಾಡಿದರು. ಸಣ್ಣ ಉದ್ಯಮಿಗಳಿಗೆ ಅವಕಾಶ ನೀಡಿ ಸ್ವಂತ ಕಾಲ ಮೇಲೆ ನಿಲ್ಲಲು ಸಹಕರಿಸಿದರು. ಜನರ ಬಲ ಹೆಚ್ಚಿಸಿ ದೇಶವನ್ನು ಆರ್ಥಿಕ ಸಬಲ ದೇಶವನ್ನಾಗಿಸಿದ್ದಾರೆ. ಹೊಸ ವ್ಯವಸ್ಥೆ ಜಾರಿಗೆ ಬಂತು. ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ತಂತ್ರಜ್ಞಾನವನ್ನು ಉನ್ನತೀಕರಿಸಿದರು ಎಂದು ಹೇಳಿದರು.
ಇಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆರ್ಥಿಕತೆಯನ್ನು ಹಣವಲ್ಲ, ಬದಲಾಗಿ ಜನ ಎಂಬ ರೀತಿ ಮಾಡಿದ್ದಾರೆ. ಸಿದ್ದರಾಮಯ್ಯ ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿ ಘೋಷಿಸಿ, ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿಗೆ ತಂದರು. ಟೀಕಿಸುವುದನ್ನೇ ಪ್ರತಿಪಕ್ಷ ಬಿಜೆಪಿಯವರು ಅಸ್ತ್ರವಾಗಿಸಿಕೊಳ್ಳಬಾರದು. ಗ್ಯಾರೆಂಟಿ ಬಿಜೆಪಿಗೆ ಯಾಕೆ ಅಜೀರ್ಣ ಆಗುತ್ತಿದೆ ಗೊತ್ತಿಲ್ಲ. ಸುಳ್ಳು ಆರೋಪ ಮಾಡಿ ಮತ ಕ್ರೋಢೀಕರಣ ಮಾಡಲು ಬಿಜೆಪಿ ಯತ್ನಿಸುತ್ತಿದೆ. ನೀಡಿದ ಯಾವುದೇ ಭರವಸೆ ಈಡೇರಿಸುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿಲ್ಲ. ಸುಳ್ಳು ಹೇಳಿದ್ದು ಇವರು, ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದವರು ಇವರು. ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ರಾಜ್ಯದ ಜನರ ಅನ್ನಕ್ಕೆ ಕಲ್ಲು ಹಾಕಿದೆ. ನಾವು ಜನ ಮೆಚ್ಚುವ ಕೆಲಸ ಮಾಡಿದ್ದೇವೆ. ಬಜೆಟ್ನಲ್ಲಿ ಕೇಂದ್ರ ಕಡಿತ ಮಾಡಿದ್ದು, ರೈತಸ್ನೇಹಿ ಎಂದು ಹೇಳಿಕೊಂಡಿದೆ. ಬಿಜೆಪಿ ಸರ್ಕಾರ ರೈತರ ಅಭಿವೃದ್ಧಿ ಮಾಡಿಲ್ಲ. ಅನುದಾನದಲ್ಲಿ ಕಡಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಂತರ ಕಾಂಗ್ರೆಸ್ ಸದಸ್ಯ ಎಸ್ ರವಿ ಮಾತನಾಡಿ, ದೇಶದಲ್ಲೇ ಅತಿಹೆಚ್ಚು ಬಜೆಟ್ ಮಂಡಿಸಿದ ರಾಜ್ಯಗಳ ಆರ್ಥಿಕ ಸಚಿವರಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ. ಕೆಲ ಅನುದಾನವನ್ನು ಭಾಗ್ಯಗಳಿಗಾಗಿ ಕಡಿತ ಮಾಡುತ್ತಾರೆ ಅಂದುಕೊಂಡಿದ್ದೆವು. ಹಾಗೆ ಆಗಿಲ್ಲ. ಇತರೆ ಇಲಾಖೆಗೆ ಅನುದಾನ ಒದಗಿಸಿ, ಭಾಗ್ಯಗಳಿಗಾಗಿ 52 ಸಾವಿರ ಕೋಟಿ ರೂ. ನೀಡಿದ್ದಾರೆ. ಪರಿಷತ್ ಸದಸ್ಯನಾಗಿ ನಾನು ಇದೇ ಮೊದಲ ಬಾರಿಗೆ ನೋಡಿದ್ದು, ಪ್ರತಿಪಕ್ಷಗಳು ತುಂಬಾ ತೀಕ್ಷ್ಣವಾಗಿ ಸರ್ಕಾರದ ಮೇಲೆ ಮುಗಿಬಿದ್ದರು. ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲೇ ಸರ್ಕಾರದ ವಿರುದ್ಧ ಹೇಳಿಕೆ ನೀಡಲು ಆರಂಭಿಸಿದರು. ಕೇಂದ್ರ ಹೈಕಮಾಂಡ್ಗೆ ರಾಜ್ಯದ ಬಿಜೆಪಿ ನಾಯಕರಲ್ಲಿನ ನಾಯಕತ್ವದ ಕೊರತೆ ಎದ್ದು ಕಂಡಿದೆ. ಇದರಿಂದ ಭಾಗ್ಯದ ವಿರುದ್ಧ ಹೋರಾಡಿದರು. ಈ ಮಣ್ಣಲ್ಲಿ ಕೋಮುವಾದದ ಬೆಳೆ ಬೆಳೆಯಲ್ಲ ಎಂಬುದನ್ನು ಅರಿಯಲಿಲ್ಲ ಬಿಜೆಪಿ. ಇದು ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ, ಯಶಸ್ವಿಯಾದ ರಾಜ್ಯ. ಅಧಿಕಾರದ ಆಸೆಗಾಗಿ ಕೋಮುವಾದವನ್ನು ಜನರಲ್ಲಿ ಬಿತ್ತಲು ಹೊರಟರು. ಭ್ರಷ್ಟಾಚಾರ ಮನೆ ಮಾತಾಗಿದ್ದು, ಈಗ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕೋಮುವಾದ, ಆತಂಕ, ಮತೀಯ ಗಲಭೆ ಹೆಚ್ಚಾಗುವಂತೆ ಮಾಡಿ, ಇಲ್ಲಿಗೆ ಕೈಗಾರಿಕೆಗಳು ಬರದೇ ರಾಜ್ಯ ಹಿನ್ನಡೆಗೆ ತೆರಳಿದೆ. ನಾಲ್ಕು ವರ್ಷದಲ್ಲಿ ಆಗಿರುವ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಇನ್ನೆಷ್ಟು ವರ್ಷ ಬೇಕು. ಆಪಲ್ ಕಂಪನಿಯ ಬಿಡಿಭಾಗ ತಯಾರಿಕಾ ಕಾರ್ಖಾನೆ ತಂದಿದ್ದು ದೇಶದಲ್ಲೇ ನಾವು ಮೊದಲು. ಆದರೆ ಈ ಸರ್ಕಾರದ ಭ್ರಷ್ಟಾಚಾರ, ಕೋಮುವಾದದಿಂದಾಗಿ ವ್ಯಾಪಾರ ಬಿದ್ದು ಹೋಗಿದೆ. ಇಂದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದೇವೆ. ತಮಿಳುನಾಡು ಮೊದಲ ಸ್ಥಾನ ಪಡೆದಿದೆ. ಈಗ ಸರಿಪಡಿಸುವುದೇ ನಮಗೆ ಸವಾಲು ಎಂದರು.
ಸದಸ್ಯ ಎಚ್ ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ಇಂತದ್ದೊಂದು ಸ್ಥಿತಿಗೆ ನಾನೂ ಕಾರಣನಾದೆನಲ್ಲಾ ಅನ್ನುವ ಬೇಸರವಿದೆ. ಯಾವುದೋ ಸಂದರ್ಭದಲ್ಲಿ ತಪ್ಪು ನಿರ್ಧಾರ ಕೈಗೊಂಡು ಬೇಡದವರ ಕೈ ಹಿಡಿದು ಬಿಟ್ಟೆ. ನನಗೆ ಎಲ್ಲೋ ಮನಸ್ಸಿಗೆ ಚುಚ್ಚುತಿತ್ತು. ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿರಿ. ನನ್ನ ತಪ್ಪಿಗೆ ನಾನು ಮೈಸೂರಿನಲ್ಲಿ ಪ್ರಾಯಶ್ಚಿತ ಮಾಡಿಕೊಂಡಿದ್ದೇನೆ. ಇಂದು ಇಲ್ಲಿ ಸುಮ್ಮನೆ ಕುಳಿತಿದ್ದೇನೆ. 40 ವರ್ಷ ಉತ್ತಮ ರಾಜಕಾರಣ ಮಾಡಿ, ಎಲ್ಲೋ ಎಡವಿಬಿಟ್ಟೆ, ತಪ್ಪು ಮಾಡಿದೆ ಎನ್ನುವ ಕೊರಗು ಕಾಡಿದೆ. ಮನಸ್ಸು ಭಾರವಾಗಿದೆ. ಆದರೂ ತಪ್ಪಾಗಿದ್ದು ಮನಸ್ಸಿನಲ್ಲಿ ಕೊರಗು ಉಳಿದುಕೊಂಡಿದೆ. ಇಂದು ಸದನದಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟು ಮನಸ್ಸು ಹಗುರಾಗುವಂತೆ ಮಾಡಿದಿರಿ ಎಂದು ನುಡಿದರು.
ಇದನ್ನೂ ಓದಿ: ಬಿಜೆಪಿ ಜೆಡಿಎಸ್ ಸದಸ್ಯರ ಗೈರಿನ ನಡುವೆಯೇ ವಿಧಾನ ಪರಿಷತ್ನಲ್ಲಿ 5 ವಿಧೇಯಕಗಳಿಗೆ ಅಂಗೀಕಾರ