ಬೆಂಗಳೂರು: ನಗರದಲ್ಲಿ ಕೋವಿಡ್ ರೂಪಾಂತರಿ ವೈರಾಣು ಪ್ರವೇಶಿಸದಂತೆ ತಡೆಗಟ್ಟಲು ಕೋವಿಡ್ ತಜ್ಞರ ಸಮಿತಿ ಜೊತೆ ಇಂದು ಸಭೆ ನಡೆಸಲಾಗಿದ್ದು, ತಜ್ಞರು ನೀಡಿರುವ ಸೂಕ್ತ ಸಲಹೆ/ಸೂಚನೆಗಳನ್ನು ಜಾರಿಗೆ ತರಲು ಮುಖ್ಯ ಆಯುಕ್ತರು ಗೌರವ್ ಗುಪ್ತಾ, ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ರೂಪಾಂತರಿ ಸೇರಿದಂತೆ ಇನ್ನಿತರ ವೈರಾಣು ತಡೆಗಟ್ಟುವ ಸಂಬಂಧ ಕೋವಿಡ್ ತಜ್ಞರ ಸಮಿತಿ ಜೊತೆ ನಡೆದ ಪರಿಶೀಲನಾ ಸಭೆಯಲ್ಲಿ, ಕೋವಿಡ್ ರೂಪಾಂತರಿ ವೈರಾಣುವಿನಿಂದ ವಿಶ್ವದಾದ್ಯಂತ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ನಗರದಲ್ಲೂ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ತಿಳಿಸಿದರು.
ತಜ್ಞರ ಸಮಿತಿಯು ಸಭೆಯಲ್ಲಿ ನೀಡಿರುವ ಪ್ರಮುಖ ಸಲಹೆ - ಸೂಚನೆಗಳು
- ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟಿಂಗ್ ಮಾಡುವುದು, ಕ್ವಾರಂಟೈನ್ ಮಾಡುವುದು, ಸಂಗ್ರಹಿಸಿರುವ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸುವುದು.
- ನಗರದಲ್ಲಿರುವ ಕಂಟೈನ್ಮೆಂಟ್ ಜೋನ್ ಗಳ ಮೇಲೆ ನಿಗಾವಹಿಸುವುದು.
- ಕ್ಲಸ್ಟರ್ಗಳಾದರೆ ಅದರ ಮೇಲೆ ಹೆಚ್ಚು ಗಮನ ಹರಿಸುವುದು.
- ಸಭೆ-ಸಮಾರಂಭಗಳು, ಪಾರ್ಟಿ, ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಿ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುವುದು.
- ಅವಶ್ಯಕತೆ ಬಿದ್ದಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸುವುದು.
- ನಗರದ ಉದ್ಯಾನ, ಚಿತ್ರಮಂದಿರ, ಮಾಲ್ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡುವುದು.
- ಹೊಸದಾಗಿ ಬಂದಿರುವ ಒಮಿಕ್ರೋನ್ ಹಾಗೂ ಇನ್ನಿತರ ವೈರಾಣು ಹರಡದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು.
- ಶಾಲೆಗಳಲ್ಲಿ ಕನಿಷ್ಠ ತಿಂಗಳಿಗೊಮ್ಮೆ ಶೇ.10 ರಷ್ಟು ಮಕ್ಕಳಿಗೆ ಪರೀಕ್ಷೆ ಮಾಡುವಂತೆ ಸೂಚನೆಗಳನ್ನು ನೀಡಿದರು.
ಕಡ್ಡಾಯವಾಗಿ ಕೋವಿಡ್ ಎರಡೂ ಡೋಸ್ ಲಸಿಕೆ ಪಡೆಯಲು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ(RWAs), ಹೋಟೆಲ್ ವ್ಯಾಪಾರಿ ಸೇರಿದಂತೆ ಇನ್ನಿತರ ಸಂಘಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲು ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ಬಾಲಸುಂದರ್, ನಿರ್ಮಲಾ ಬುಗ್ಗಿ, ಕೋವಿಡ್ ತಜ್ಞರ ಸಮಿತಿ ಸದಸ್ಯರು ಹಾಗೂ ಇನ್ನಿತರರು ಭಾಗಿಯಾಗಿದ್ದರು.