ಬೆಂಗಳೂರು: ಮುಂಬಯಿ ತಂಡದಲ್ಲಿ ಯಾವುದೇ ಬಿರುಕು, ಅಸಮಾಧಾನ ಇಲ್ಲ. ಬೇಕಿದ್ದರೆ ನಮ್ಮ ಟೀಮ್ನ 17 ಮಂದಿಯೂ ಶೀಘ್ರದಲ್ಲೇ ಸಭೆ ಸೇರಿಸಲಾಗುವುದೆಂದು ಕ್ರೀಡಾ ಸಚಿವ ಡಾ. ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಮುಖಂಡರು ನನ್ನ ನೇತೃತ್ವದಲ್ಲೇ ಹೋಟೆಲ್ನಲ್ಲಿ ಸಭೆ ಸೇರುತ್ತೇವೆ. ಆ ಮೂಲಕ ಒಗ್ಗಟ್ಟು ಇದೆ ಎಂಬುದನ್ನು ತೋರಿಸುತ್ತೇವೆ. ನಿಮ್ಮನ್ನು ಕೂಡ (ಮಾಧ್ಯಮದವರನ್ನು) ಆಹ್ವಾನಿಸಲಾಗುವುದು ಎಂದರು.
ಒಂದು ಮನೆಯಲ್ಲಿ ಇರುವ ನಾಲ್ವರು ಮಕ್ಕಳಲ್ಲೇ ವ್ಯತ್ಯಾಸ ಇರುತ್ತದೆ. ಎಲ್ಲ ಸರ್ಕಾರ, ಇಲಾಖೆಯಲ್ಲಿ ಒಂದಷ್ಟು ಅಸಮಾಧಾನ ಇರುವುದು ಸಹಜ. ಎಲ್ಲ ಖಾತೆಗಳೂ ಒಳ್ಳೆಯವೇ, ಎಲ್ಲ ಖಾತೆಗಳಲ್ಲೂ ಅನುದಾನ ಇದ್ದೇ ಇದೆ. ಇದು ಬೇಗ ಬಗೆಹರಿಯಲಿದೆ ಎಂದು ಹೇಳಿದರು.
ಹಿರಿಯ ನಾಯಕ ಹೆಚ್. ವಿಶ್ವನಾಥ್ ಒಬ್ಬಂಟಿ ಅಲ್ಲ. ಕೋರ್ಟ್ ಪ್ರಕರಣ ಹಿನ್ನೆಲೆಯಲ್ಲಿ ಅವರು ಮಂತ್ರಿ ಆಗಿಲ್ಲ. ಆ ಪ್ರಕರಣ ಬಗೆಹರಿದ ಮೇಲೆ ಅವರು ಮಂತ್ರಿ ಆಗುತ್ತಾರೆ. ನಾವು 17 ಮಂದಿ ಸಿಎಂ ಅವರನ್ನು ನಂಬಿ ಬಿಜೆಪಿಗೆ ಬಂದಿದ್ದೇವೆ. ನಾವೆಲ್ಲ ಒಟ್ಟಾಗಿ ಇದ್ದೇವೆ. ಎಲ್ಲರನ್ನೂ ನಾನೇ ಸೇರಿಸುತ್ತೇನೆ ಎಂದರು.
ಓದಿ...ಇವ್ರದ್ ಅವ್ರಿಗೆ, ಅವ್ರದ್ ಇವ್ರಿಗೆ ಖಾತೆ ಅದಲ್‌ಬದಲ್.. ಅಸಮಾಧಾನಿತರ ಸಂತೈಕೆ ಸಿಎಂಗೆ ಸವಾಲು..
ಡಾ.ಕೆ. ಸುಧಾಕರ್ ವೈದ್ಯರು. ಲಾಕ್ ಡೌನ್ ಸಂದರ್ಭದಲ್ಲಿ ಅವರು ಮಾಡಿರುವ ಕೆಲಸದ ಹಿನ್ನಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತೆ ಕೇಳಿರಬಹುದು, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಮಾತ್ರ ಯಾವ ಖಾತೆಗೂ ಬೇಡಿಕೆ ಇಡುವುದಿಲ್ಲ ಎಂದರು.
ಯೋಗೇಶ್ವರ್ ಮಂಡ್ಯದಿಂದ ಗೆದ್ದಿದ್ದಾರಾ? : ಸಚಿವ ಸಿಪಿ ಯೋಗೇಶ್ವರ್ ಅವರಿಗೆ ಮಂಡ್ಯ ಉಸ್ತುವಾರಿ ನೀಡುವ ಸಾಧ್ಯತೆ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಅವರೇನು ಮಂಡ್ಯದಿಂದ ಗೆದ್ದು ಬಂದಿದ್ದಾರಾ? ಎಂದು ಖಾರವಾಗಿ ಪ್ರಶ್ನಿಸಿದರು.
ಮಂಡ್ಯದಿಂದ ಗೆದ್ದು ಬಂದಿರುವುದು ನಾನು. ನಾನೇ ಮಂಡ್ಯ ಜಿಲ್ಲಾ ಉಸ್ತುವಾರಿಯಾಗಿದ್ದು, ಮುಂದೆ ಕೂಡ ನಾನೇ ಆಗಿರಲಿದ್ದೇನೆ. ಯಾವುದೇ ಕಾರಣಕ್ಕೂ ಈ ಉಸ್ತುವಾರಿಯನ್ನು ಬದಲಾಯಿಸುವುದಿಲ್ಲ, ಮುಖ್ಯಮಂತ್ರಿಗಳು ಕೂಡ ಜಿಲ್ಲಾ ಉಸ್ತುವಾರಿ ಬದಲಾಯಿಸಿ, ಬೇರೆ ಯಾರಿಗೂ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯಕ್ಕೆ ನನ್ನ ಹಾಗೂ ಮುಖ್ಯಮಂತ್ರಿಗಳ ಅನುಮತಿ ಇಲ್ಲದೇ ಸಿಪಿ ಯೋಗೇಶ್ವರ್ ಹೇಗೆ ಬರುತ್ತಾರೆ. ಸಿಪಿ ಯೋಗೇಶ್ವರ್ ಬೇಕಿದ್ದರೆ ಮಂಡ್ಯಕ್ಕೆ ಬರಲಿ, ಒಳ್ಳೆಯ ಊಟ ಮಾಡಿಕೊಂಡು ಹೋಗಲಿ. ಅವರ ಇಲಾಖೆಗೆ ಸಂಬಂಧಿಸಿದಂತೆ ಏನಾದರೂ ಕೆಲಸ ಇದ್ದರೆ, ಅದನ್ನು ಮಾಡಿಕೊಂಡು ಹೋಗಲಿ. ಆದರೆ, ಅವರಿಗೆಲ್ಲ ಮಂಡ್ಯ ಉಸ್ತುವಾರಿ ಕೊಡುವ ಮಾತಿಲ್ಲ ಎಂದು ಖಡಕ್ ಆಗಿಯೇ ನುಡಿದರು.