ಬೆಂಗಳೂರು: ಖಾಸಗಿ ಶಾಲಾ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಸ್ಥಗಿತ ಮಾಡುವ ನಿರ್ಧಾರವನ್ನು ಸದ್ಯಕ್ಕೆ ವಾಪಸ್ ಪಡೆಯಲಾಗಿದೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ಫೀಸ್ ಕಟ್ಟದಿದ್ರೂ ಫಲಿತಾಂಶ ನೀಡುವಂತೆ ಸಚಿವ ಸುರೇಶ್ ಕುಮಾರ್ ನೀಡಿದ್ದ ಹೇಳಿಕೆಗೆ ಕೆರಳಿದ ಖಾಸಗಿ ಶಾಲೆಗಳು ಫೀಸ್ ಕಟ್ಟದೆ ಇದ್ದರೆ ಆನ್‌ಲೈನ್ ಕ್ಲಾಸ್‌ಗಳನ್ನು ಸ್ಥಗಿತ ಮಾಡೋದಕ್ಕೆ ಕರೆ ನೀಡಿದ್ದವು. ಈ ಸಂಬಂಧ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಖಾಸಗಿ ಶಾಲಾ ಸಂಘಟನೆಗಳೊಂದಿಗೆ ಸಭೆ ನಡೆಸಿದ್ದು ಸಫಲವಾಗಿದೆ.
ಸುಮಾರು ಎರಡೂವರೆ ಗಂಟೆಗಳ ಸಭೆ ನಡೆಸಿ ನಂತರ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ಇವತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳ ಸಭೆ ಮಾಡಲಾಗಿದೆ. ಕೆಲ ವಿಚಾರದ ಕುರಿತು ಸರ್ಕಾರಕ್ಕೆ ವರದಿ ಮಾಡಬೇಕಿದೆ. ಯಾರು ಹಳೇ ಬಾಕಿ ಶುಲ್ಕ ಹಾಗೂ ಮೊದಲ ಕಂತಿನ ಶುಲ್ಕ ಕಟ್ಟಿಲ್ಲವೋ ಅಂತಹ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ಅನ್ನು ನವೆಂಬರ್ 30ರಿಂದ ಸ್ಥಗಿತ ಮಾಡುವುದಾಗಿ ಹೇಳಿದ್ದರು. ಸದ್ಯಕ್ಕೆ ಅದನ್ನು ಸ್ಥಗಿತಗೊಳಿಸುವುದಿಲ್ಲ, ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಏನೇ ಸಮಸ್ಯೆಗಳು ಇದ್ದರೂ ಇಲಾಖೆಯ ಗಮನಕ್ಕೆ ತರಲು ತಿಳಿಸಲಾಗಿದೆ. ಶಿಕ್ಷಕರ ವೇತನ ಸಮಸ್ಯೆ, ಲೋನ್ ಸಮಸ್ಯೆ ಸೇರಿದಂತೆ ಹಲವು ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಒಟ್ಟುಗೂಡಿಸಿ ವರದಿಯನ್ನು ಶಿಕ್ಷಣ ಸಚಿವರಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಗೆ ವಿರೋಧ, ಪ್ರೇಯಸಿ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಿಯತಮ
ಈ ಕುರಿತು ಮಾತನಾಡಿದ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಇವತ್ತು ಆಯುಕ್ತರ ಜೊತೆ ಸಭೆ ಮಾಡಿದ್ದೇವೆ. ಆಯುಕ್ತರು ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಆನ್‌ಲೈನ್ ಸ್ಥಗಿತ ಮಾಡೋದಿಲ್ಲ. ಅದನ್ನು ಮುಂದುವರೆಸುತ್ತೇವೆ. ಕಳೆದ ವರ್ಷವೂ ಶುಲ್ಕ ಕೊಟ್ಟಿಲ್ಲ. ಈ ಬಾರಿಯೂ ಕೂಡ ದಾಖಲು ಮಾಡಿಲ್ಲ. ಅಂತಹ ಮಕ್ಕಳಿಗೆ ಮಾತ್ರ ಆನ್‌ಲೈನ್ ಸ್ಥಗಿತ ಮಾಡ್ತೇವೆ ಅಂತ ಹೇಳಿದ್ದೇವೆ. ಆದ್ರೆ ಆಯುಕ್ತರು ಸ್ಥಗಿತ ಮಾಡದಂತೆ ಮನವಿ ಮಾಡಿದ್ದಾರೆ. ಸದ್ಯಕ್ಕೆ ಎಲ್ಲರಿಗೂ ಆನ್‌ಲೈನ್ ಶಿಕ್ಷಣ ಕೊಡ್ತೇವೆ ಎಂದರು.
ನಂತರ ಮಾತನಾಡಿ, ಫೀಸ್ ಕಟ್ಟದವರಿಗೆ ಕೆಲ ದಿನಗಳ ಕಾಲ ಟೈಂ ಕೊಡ್ತೀವಿ. ಕನಿಷ್ಠ ಶುಲ್ಕವನ್ನು ಕಟ್ಟಿ ಅಂತ ಹೇಳ್ತಿದ್ದೇವೆ. ಇನ್ನು 1ರಿಂದ 8ನೇ ತರಗತಿಯವರೆಗೆ ಏಕಾಏಕಿ ಪಾಸ್ ಮಾಡೋದಿಕ್ಕೆ ಯಾವ ಸರ್ಕಾರವೇ ಆಗ್ಲಿ ಶಾಲೆಯೇ ಆಗ್ಲಿ ಮಾಡಲು ಬರೋದಿಲ್ಲ. ಇದು ವಿದ್ಯಾರ್ಥಿಗಳಿಗೂ ಒಳ್ಳೆಯದಲ್ಲ. ಈ ಬಗ್ಗೆ ಕೂಡ ತಿಳಿಸಿದ್ದೇವೆ. ಯಾವುದೇ ಅಸೆಸ್ಮೆಂಟ್ ಇಲ್ಲದೆ ಪಾಸ್ ಮಾಡಿ ಅನ್ನೋದು ವೈಲೇಷನ್ ಆಗುತ್ತದೆ. ಕಾಯ್ದೆ ಕಾನೂನು ಪ್ರಕಾರ ನಡೆಯಬೇಕಿದೆ. ಇವೆಲ್ಲವನ್ನು ಆಯುಕ್ತರ ಮುಂದೆ ಹೇಳಿದ್ದೇವೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತದೆ ಎಂಬ ನಂಬಿಕೆ ಇದೆ. ನಮ್ಮ ಮನವಿಗೆ ಸ್ಪಂದನೆ ಸಿಗದೆ ಇದ್ದರೆ ಮತ್ತೆ ಸಭೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.