ಬೆಂಗಳೂರು: ನಗರದಲ್ಲಿ ಕೋವಿಡ್ ಹತೋಟಿಗೆ ತರುವ ಕುರಿತು ಬಿಬಿಎಂಪಿಯ ಕೋವಿಡ್ ವಿಶೇಷ ಕಾರ್ಯಪಡೆ ನಿನ್ನೆ ಸಭೆ ನಡೆಸಿತು.
ಪ್ರತಿನಿತ್ಯ ಹತ್ತುಸಾವಿರ ಜನರ ಸೋಂಕು ಪರೀಕ್ಷೆ ನಡೆಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಕೋವಿಡ್ ಕುರಿತು ವ್ಯಾಪಕವಾಗಿ ಜನಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಸದ್ಯ ಕೋವಿಡ್ ಎಂದರೆ ಭಯ ಬೀಳುವ ವಾತಾವರಣವಿದ್ದು, ಇದರಿಂದಲೇ ಸೋಂಕಿನ ತೀವ್ರತೆ ಹೆಚ್ಚಾಗುತ್ತಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಖಾಸಗಿ ಲ್ಯಾಬ್ಗಳಲ್ಲಿ ಪರೀಕ್ಷೆ ನಡೆಸಿದ ಬಳಿಕ ತ್ವರಿತವಾಗಿ ವರದಿಯನ್ನು ಐಸಿಎಂಆರ್ಗೆ ಅಪ್ಡೇಟ್ ಮಾಡಬೇಕು. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು, ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲು ಸಿಬ್ಬಂದಿ ಕೊರತೆ ಸರಿಪಡಿಸುವಂತೆ ನಿರ್ದೇಶನ ನೀಡಿದ್ದಾರೆ. ಪ್ರತಿ ವಾರ್ಡ್ಗೆ 25 ಸಿಬ್ಬಂದಿಯಂತೆ, 4,500 ಸಿಬ್ಬಂದಿ ತ್ವರಿತವಾಗಿ ಬೇಕಿದೆ ಎಂದರು.
ಇದಕ್ಕಾಗಿ ನರ್ಸಿಂಗ್, ಪ್ಯಾರಾಮೆಡಿಕಲ್, ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಎ ಸಿಮ್ಟಮ್ಯಾಟಿಕ್ ಕೊರೊನಾ ಸೋಂಕಿತರು ಮನೆಯಲ್ಲೇ ಐಸೋಲೇಷನ್ ಆಗಬೇಕು. ಸೋಂಕು ಪರೀಕ್ಷೆಯ ವರದಿ ಬರುವವರೆಗೂ ಐಸೋಲೇಷನ್ನಲ್ಲಿ ಇರಲು ಜನರಿಗೆ ಅರಿವು ಮೂಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಆಯುಕ್ತರು ತಿಳಿಸಿದರು.
ಇನ್ನು ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ಲಕ್ಷಾಂತರ ರೂಪಾಯಿ ಮೊತ್ತ ತೆಗೆದುಕೊಳ್ಳುತ್ತಿರುವುದು ವರದಿಯಾಗಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಮೇಯರ್ ಗೌತಮ್ ಕುಮಾರ್ ಸೂಚಿಸಿದ್ದಾರೆ.