ಬೆಂಗಳೂರು: ಮೆಡಿಕಲ್ ಸೀಟ್ ಬ್ಲಾಕಿಂಗ್ ಅವ್ಯವಹಾರದ ಬಗ್ಗೆ ದಾಖಲೆಗಳಿದ್ದರೆ ಕೊಡಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. ಮೆಡಿಕಲ್ ಸೀಟ್ ಬ್ಲಾಕಿಂಗ್ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂಬ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿಯವರ ಫೇಸ್ ಬುಕ್ ಪೋಸ್ಟ್ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ಮೆಡಿಕಲ್ ಕಾಲೇಜುಗಳ ಮೆಡಿಕಲ್ ಸೀಟ್ ಬ್ಲಾಕಿಂಗ್ನಿಂದ ಸಾವಿರಾರು ಕೋಟಿ ಅವ್ಯವಹಾರವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಪತ್ರ ಬರೆದಿದೆ. ಇಷ್ಟು ದೊಡ್ಡ ಅವ್ಯವಹಾರ ಆಗಿದ್ದರೂ ಸರ್ಕಾರ, ಐಟಿ ಇಲಾಖೆ ಏನ್ ಮಾಡ್ತಿದೆ? ಪ್ರಕರಣದ ಬಗ್ಗೆ ಮೌನವಹಿಸಿ ಖಾಸಗಿ ಲಾಬಿಗೆ ಮಣಿದ್ರಾ? ಎಂದು ಫೇಸ್ ಬುಕ್ನಲ್ಲಿ ಶಂಕರ್ ಬಿದರಿ ಪ್ರಶ್ನೆ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಈ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಸೀಟ್ ಬ್ಲಾಕಿಂಗ್ ಅವ್ಯವಹಾರದ ವಿಚಾರದಲ್ಲಿ ನಾನು ಮತ್ತು ನಮ್ಮ ಸರ್ಕಾರ ಕಠಿಣ ಕ್ರಮದ ನಿಲುವನ್ನು ಹೊಂದಿದ್ದೇವೆ. ನನ್ನ ಬಳಿ ಶಂಕರ್ ಬಿದರಿ ನೇರವಾಗಿ ಹೇಳಬಹುದಿತ್ತು. ಅವರು ನನ್ನ ಆತ್ಮೀಯರೇ, ನಾನೇ ಅವರ ಜೊತೆ ಮಾತನಾಡಿ ಮಾಹಿತಿ ಕಲೆ ಹಾಕುತ್ತೇನೆ. ಅವರ ಬಳಿ ಏನಾದ್ರೂ ದಾಖಲೆಗಳಿದ್ದರೆ ಕೊಡಲಿ ಎಂದಿದ್ದಾರೆ.