ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರರು ಮತ್ತು ಮಾಧ್ಯಮ ನಿರ್ವಹಣಾ ತಂಡದ ಕಾರ್ಯವೈಖರಿ ಕುರಿತು ಪ್ರಧಾನಿ ನರೇಂದ್ರ ಮೋದಿ ಚುಟುಕು ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಮೋದಿ ಅಂದ್ರೆ ವಿಷದ ಹಾವು ಇದ್ದಂತೆ. ವಿಷ ಹೌದೋ, ಇಲ್ಲವೋ ಎಂದು ನೆಕ್ಕಿ ನೋಡಿದರೆ ನೀವು ಸತ್ತಂತೆ ಹೇಳಿಕೆ ವಿಚಾರವನ್ನು ಕೇಂದ್ರೀಕರಿಸಿ ಮೋದಿ ಕೆಲಕಾಲ ಮಾತುಕತೆ ನಡೆಸಿದರು.
ರಾಜ್ಯ ರಾಜಧಾನಿಯಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಿಐಇಸಿ ಹೆಲಿಪ್ಯಾಡ್ ನಲ್ಲಿ ಬಿಜೆಪಿ ಮಾಧ್ಯಮ ವಕ್ತಾರರು ಮತ್ತು ಮಾಧ್ಯಮ ನಿರ್ವಹಣಾ ತಂಡದ ಜೊತೆ ಚರ್ಚೆ ನಡೆಸಿದರು. 10 ನಿಮಿಷಗಳ ಕಾಲ ರಾಜ್ಯದ ಮಾಧ್ಯಮ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ವಿಷ ಸರ್ಪ ಹೇಳಿಕೆಯ ಪರಿಣಾಮ ಹೇಗಿದೆ? ನೀವೆಲ್ಲಾ ದಿನದಲ್ಲಿ ಎಷ್ಟು ಸಮಯವನ್ನು ಇಲ್ಲಿ ಕರ್ತವ್ಯಕ್ಕೆ ನೀಡುತ್ತಿದ್ದೀರಿ? ಚುನಾವಣೆಗೆ ವಿಭಾಗವಾರು ಮಾಧ್ಯಮ ಕೇಂದ್ರ ಸ್ಥಾಪನೆ ಮಾಡಿರುವುದು ಹೇಗೆ ಕಾರ್ಯನಿರ್ವಹಣೆ ಆಗುತ್ತಿದೆ ಎಂದು ಮಾಹಿತಿ ಪಡೆದುಕೊಂಡರು.
ಹೈಕಮಾಂಡ್ ಅಣತಿಯಂತೆ ರಾಜ್ಯದಲ್ಲಿ ಹೊಸದಾಗಿ ಮಾಧ್ಯಮ ನಿರ್ವಹಣಾ ತಂತ್ರಗಳನ್ನು ಅಳವಡಿಸಿಕೊಂಡಿದ್ದು, ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಪ್ರತಿಕ್ರಿಯೆ ಸೇರಿದಂತೆ ರಾಜ್ಯ ಮಾಧ್ಯಮ ನಿರ್ವಹಣಾ ತಂಡ ಕೆಲಸ ನಿರ್ವಹಣೆ ಕುರಿತು ಪರಾಮರ್ಶೆ ನಡೆಸಿದ ಮೋದಿ, ಇನ್ನು ಎರಡು ವಾರ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು, ಪೂರ್ಣ ಪ್ರಮಾಣದ ಸಮಯ ಮೀಸಲಿಟ್ಟು ಕೆಲಸ ಮಾಡುವಂತೆ ಮೋದಿ ಸಲಹೆ ನೀಡಿದರು.
ಇನ್ನು ವಕ್ತಾರರ ಜವಾಬ್ದಾರಿ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು. ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡುತ್ತಿರುವುದು,ಸುದ್ದಿಗೋಷ್ಠಿ ನಡೆಸುತ್ತಿರುವುದು,ಮಾಧ್ಯಮ ಹೇಳಿಕೆ ನೀಡುತ್ತಿರುವುದು,ಮಾಧ್ಯಮ ಸಂವಾದಗಳಲ್ಲಿ ಸಮರ್ಥವಾಗಿ ತಿರುಗೇಟು ನೀಡುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು. ಪರಿಣಾಮಕಾರಿಯಾಗಿ ಪಕ್ಷವನ್ನು ಸಮರ್ಥಿಸಿಕೊಳ್ಳಬೇಕು, ಆರೋಪಗಳಿಗೆ ತಕ್ಕ ತಿರುಗೇಟು ನೀಡಬೇಕು ಎಂದು ಮೋದಿ ಸಲಹೆ ನೀಡಿದರು ಎನ್ನಲಾಗಿದೆ.
ರೋಡ್ ಶೋ ವೇಳೆ ನಮೋಗೆ ಹೂವಿನ ಸುರಿಮಳೆ.. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿಗೆ ಪುಷ್ಪವೃಷ್ಟಿಗೈಯುವ ಮೂಲಕ ಕ್ಷೇತ್ರದ ಜನತೆ ಸ್ವಾಗತಿಸಿದರು. ಈ ವೇಳೆ ಮೋದಿ ಪರ ಜಯಘೋಷಣೆ ಮೊಳಗಿಸಿದರು. ಅಪಾರ ಜನಸ್ತೋಮದತ್ತ ಕೈಬೀಸುತ್ತಲೇ ಮೋದಿ ಮೋಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆರು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಮೊದಲ ದಿನದ ರಾಜ್ಯ ಪ್ರವಾಸ ಬೆಂಗಳೂರಿನ ರೋಡ್ ಶೋ ಮೂಲಕ ಮುಕ್ತಾಯಗೊಂಡಿತು. ಸಂಜೆ 6.15ಕ್ಕೆ ನಗರದ ತುಮಕೂರು ರಸ್ತೆಯಲ್ಲಿರುವ ನೈಸ್ ರಸ್ತೆ ಜಂಕ್ಷನ್ ಗೆ ಆಗಮಿಸಿದ ಮೋದಿ, ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.
ಇದನ್ನೂಓದಿ:ದೇಶಕ್ಕಾಗಿ ಪಿಎಂ ಹುದ್ದೆ ತ್ಯಾಗ ಮಾಡಿದವರಿಗೆ ಯತ್ನಾಳ್ ವಿಷಕನ್ಯೆ ಎಂದಿರುವುದು ಖಂಡನೀಯ: ಎಂ ಬಿ ಪಾಟೀಲ್