ಬೆಂಗಳೂರು: ಅನಾರೋಗ್ಯ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಕಟ್ಟಡದ 11ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. 31 ವರ್ಷದ ಪೃಥ್ವಿಕಾಂತ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡವ. ಆಂಧ್ರದ ಕಡಪ ಮೂಲದ ಈತ ಕಳೆದ ಮೂರು ತಿಂಗಳ ಹಿಂದೆ ವಿವಾಹವಾಗಿ ಅಮೃತಹಳ್ಳಿಯಲ್ಲಿ ವಾಸವಾಗಿದ್ದ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನ್ಯೂರಾಲಜಿ ಕೋರ್ಸ್ ವ್ಯಾಸಂಗ ಮಾಡುತ್ತಿದ್ದು, ಮುಂದಿನ ಐದು ತಿಂಗಳಲ್ಲಿ ಎಂಬಿಬಿಎಸ್ ವ್ಯಾಸಂಗ ಪೂರ್ಣಗೊಳ್ಳುತಿತ್ತು. ಇಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಪತ್ನಿ ಮಲಗಿರಬೇಕಾದರೆ ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾನೆ. ಸಾವಿಗೂ ಮುನ್ನ ಮೊಬೈಲ್ನಲ್ಲಿ ತೆಲುಗಿನಲ್ಲಿ ಡೆತ್ ನೋಟ್ ಬರೆದಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ದೌಡಾಯಿಸಿರುವ ಅಮೃತಹಳ್ಳಿ ಪೊಲೀಸರು ಮೊಬೈಲ್ ಪರಿಶೀಲನೆ ನಡೆಸಿದ್ದಾರೆ.