ಬೆಂಗಳೂರು: ಬಿಬಿಎಂಪಿಯ ವಿವಿಧ ಕಾಮಗಾರಿಗಳಲ್ಲಿ ಗುತ್ತಿಗೆದಾರರು ನಕಲಿ ದಾಖಲೆ ನೀಡಿದ್ದು, ಇದರಲ್ಲಿ ಪಾಲಿಕೆ ಇಂಜಿನಿಯರ್ಗಳೂ ಶಾಮೀಲಾಗಿದ್ದಾರೆ ಎಂದು ಮೇಯರ್ ಗೌತಮ್ ಕುಮಾರ್ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ಗೆ ಪತ್ರ ಬರೆದಿದ್ದಾರೆ.
ಪಾಲಿಕೆಯ ಕೆಲ ಅಧಿಕಾರಿಗಳು, ಗುತ್ತಿಗೆದಾರರ ಜೊತೆ ಶಾಮೀಲಾಗಿದ್ದು, ನಕಲಿ ಬಿಲ್ ಸೃಷ್ಟಿಸಿದ್ದಾರೆ. ಪಾಲಿಕೆಯ ರಸ್ತೆ, ಮೂಲಭೂತ ಸೌಕರ್ಯ ವಿಭಾಗ, ಬೃಹತ್ ನೀರುಗಾಲುವೆ ವಿಭಾಗದಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಅಲ್ಲದೆ ನಕಲಿ ದಾಖಲೆಗಳಿದ್ದರೂ ಟೆಂಡರ್ನ ತಾಂತ್ರಿಕ ಬಿಡ್ ಮೌಲ್ಯ ಮಾಪನ ಕಾರ್ಯದಲ್ಲಿ ಉದ್ದೇಶಪೂರ್ವಕವಾಗಿ ಅಧಿಕಾರಿಗಳೂ ತಪ್ಪು ಮಾಡಿದ್ದಾರೆಂದು ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಎಸಿಆರ್ ಅಭಿಜಿತ್, ರಾಮಲಿಂಗಂ, ಯೋಗೇಶ್, ಕೆ.ಜೆ.ವಿಶ್ವನಾಥ್ ಸೇರಿದಂತೆ ಹಲವು ಗುತ್ತಿಗೆದಾರರ ಹೆಸರಲ್ಲಿ ಅಕ್ರಮ ನಡೆದಿದೆ. ಜೊತೆಗೆ ಕಾಮಗಾರಿ ನಡೆಯದೇ ಇದ್ದರೂ ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. ರಾಜರಾಜೇಶ್ವರಿ ನಗರ, ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ವಲಯದಲ್ಲಿ ರಸ್ತೆ ಕಾಮಗಾರಿ, ಚರಂಡಿ, ನಗರೋತ್ಥಾನ ಕಾಮಗಾರಿಗಳಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.