ಬೆಂಗಳೂರು : ರಾಜ್ಯ ಸರ್ಕಾರ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಒಟ್ಟುಗೂಡಿ ಸೆ.21ರಂದು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ನಗರದ ಗಾಂಧಿಭವನದಲ್ಲಿ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಸಮಿತಿಯ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೈತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ ರಾಜ್ಯದ ಎಲ್ಲಾ ಜನಪರವಾಗಿರುವ ಸುಮಾರು 27 ಸಂಘಟನೆಗಳು ಒಂದಾಗಿ ಸೆ. 21ರಂದು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಿದ್ದೇವೆ ಎಂದರು.
ಸೆ. 21ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುವ ಚಳವಳಿಗಳು ಪರ್ಯಾಯ ಜನತಾ ಅಧಿವೇಶನದ ಸಂದರ್ಭದಲ್ಲಿ ನಿತ್ಯ ಒಂದೊಂದು ವಿಷಯ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ನಡೆಯುವ ಈ ಅಧಿವೇಶನ ಮತ್ತು ಸತ್ಯಾಗ್ರಹವನ್ನು ಬೆಂಬಲಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಧರಣಿ ಸತ್ಯಾಗ್ರಹ, ಪ್ರತಿಭಟನೆ ನಡೆಸಿ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ಹಿಂಪಡೆಯಲು ಒತ್ತಾಯಿಸಲಾಗುವುದು ಎಂದರು.
ಸೆ.16ಕ್ಕೆ ಎಲ್ಲಾ ಶಾಸಕರ ಕಚೇರಿ ಮುಂದೆ ಧರಣಿ : ರಾಜ್ಯ ಸರ್ಕಾರ ಅಧಿವೇಶನದಲ್ಲಿ ತನ್ನ ಸುಗ್ರೀವಾಜ್ಞೆಗಳಿಗೆ ಅಂಗೀಕಾರ ಪಡೆಯಬೇಕು. ಆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ರೈತರ, ಕಾರ್ಮಿಕರ ಹಿತದೃಷ್ಟಿ ಬಲಿಕೊಡುವ ಸುಗ್ರೀವಾಜ್ಞೆಗಳನ್ನು, ರಾಜ್ಯದ ಎಲ್ಲಾ ಶಾಸಕರು ಪಕ್ಷಾತೀತವಾಗಿ ವಿರೋಧಿಸಬೇಕೆಂದು ಒತ್ತಾಯಿಸಿ, ಇದೇ ಸೆ.16 ರಂದು ರಾಜ್ಯದ ಎಲ್ಲಾ ಶಾಸಕರ ಕಚೇರಿ ಮುಂಭಾಗ ಧರಣಿ ನಡೆಸಲಾಗುತ್ತಿದೆ. ಜತೆಗೆ ಈ ಬಗ್ಗೆ ಮನವಿ ಪತ್ರಗಳನ್ನು ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.