ಬೆಂಗಳೂರು: ಕೊರೊನಾ ನಿಯಂತ್ರಣ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ಗಳನ್ನು ವಿತರಿಸಲು ಗೃಹ ಇಲಾಖೆ ಮುಂದಾಗಿದ್ದು, ಅದಕ್ಕಾಗಿ ಕೈದಿಗಳಿಂದಲೇ ಮಾಸ್ಕ್ ತಯಾರಿಕೆ ಮಾಡಿಸಲಾಗುತ್ತಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೊರೊನಾ ವೈರಸ್ ಹರಡದ ರೀತಿಯಲ್ಲಿ ಪೊಲೀಸರು ವಿಶೇಷ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮಾಸ್ಕ್ ಒದಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಹಾಯಕರಾಗಿ ಪೊಲೀಸರು ಇರ್ತಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಹಾಯಕರಾಗಿ ಇರಲಿದ್ದಾರೆ. ಹಾಗಾಗಿ ಮಾಸ್ಕ್ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ದಿನಕ್ಕೆ ಒಂದು ಸಾವಿರ ಮಾಸ್ಕ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕೈದಿಗಳಿಂದಲೇ ಮಾಸ್ಕ್ ತಯಾರಿಕೆ ಮಾಡಲಾಗುತ್ತಿದೆ. ದಿನಕ್ಕೆ ಸಾವಿರ ಮಾಸ್ಕ್ ಉತ್ಪಾದಿಸಿ ವಿತರಣೆ ಮಾಡಲಾಗುತ್ತಿದೆ ಎಂದು ಕೈದಿಗಳು ತಯಾರಿಸಿದ ಮಾಸ್ಕ್ ಪ್ರದರ್ಶಿಸಿದರು. ಜೈಲಲ್ಲಿ ಸ್ವಚ್ಚತೆ ಕಾಪಾಡುವ ಬಗ್ಗೆ ಸೂಚನೆ ನೀಡಿದ್ದು, ಹೊಸ ಕೈದಿಗಳ ತಪಾಸಣೆ ನಡೆಸಿ ಒಳಗೆ ಸೇರಿಸಿಕೊಳ್ಳುವುದು, ಜೈಲಿನಲ್ಲಿ ಕೈದಿಗಳ ಭೇಟಿಗೆ ಜನರ ಪ್ರವೇಶ 15 ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ ಎಂದರು.