ಬೆಂಗಳೂರು: ಮಂತ್ರಿ ಗ್ರೂಪ್ನ ಎಂಡಿ ಸುಶೀಲ್ ಪಾಂಡುರಂಗ ಮತ್ತು ಅವರ ಪುತ್ರ ಪ್ರತೀಕ್ ಮಂತ್ರಿಯನ್ನ ತಡರಾತ್ರಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆ ಅತಿ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಮಂತ್ರಿ ಡೆವಲಪರ್ಸ್ ವಿರುದ್ಧ ಹೂಡಿಕೆದಾರರಿಗೆ ವಂಚಿಸಿದ ಆರೋಪದಡಿ 2019ರ ಜುಲೈನಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಏಳೆಂಟು ಪ್ರಕರಣ ದಾಖಲಾಗಿದ್ದವು. 2021ರ ಜೂನ್ 26ರಂದು ಮಂತ್ರಿ ಗ್ರೂಪ್ ಮೇಲೆ ದಾಳಿ ನಡೆಸಿದ್ದ ಐಟಿ ಅನೇಕ ದಾಖಲೆಗಳನ್ನು ವಶಕ್ಕೆ ಪಡೆದಿತ್ತು.
ಬಳಿಕ ಐಟಿ ಅಧಿಕಾರಿಗಳು, ದಾಖಲೆಗಳ ಸಮೇತ ಇಡಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು. ವೈಯಕ್ತಿಕ ಮತ್ತು ಸಂಸ್ಥೆಯ ವ್ಯವಹಾರದಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಪ್ರಿವೆನ್ನನ್ ಆಫ್ ಮನಿ ಲ್ಯಾಂಡರಿಂಗ್ ಆ್ಯಕ್ಟ್ ಅಡಿ ವಿಚಾರಣೆ ನಡೆಸಿ ಕಳೆದ ಜೂನ್ 25ರಂದು ಸುಶೀಲ್ ಮಂತ್ರಿಯನ್ನ ಬಂಧಿಸಿದ್ದರು.
ನಂತರದ ದಿನಗಳಲ್ಲಿ ಸುಶೀಲ್ ಮಂತ್ರಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ, ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದ್ದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸಿಐಡಿ ಅಧಿಕಾರಿಗಳು ಸುಶೀಲ್ ಮತ್ತು ಅವರ ಪುತ್ರನನ್ನು ಮತ್ತೆ ಬಂಧಿಸಿದ್ದು, ಸೆಪ್ಟೆಂಬರ್ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಕಿಂಗ್ ಚಾರ್ಲ್ಸ್ III ಬ್ರಿಟನ್ನ ರಾಜ ಎಂದು ಅಧಿಕೃತ ಘೋಷಣೆ