ಬೆಂಗಳೂರು: ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ಆಗಮಿಸಿರುವ ಹಿನ್ನೆಲೆಯಲ್ಲಿ ಜಯನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದ ಸಿಎಂ ಬಸವರಾಜ ಬೊಮ್ಮಾಯಿ, ಬಳಿಕ ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಜೊತೆಗಿದ್ದರು.
'ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಮುಖ್ಯಮಂತ್ರಿಗಳು ಬರಬೇಕು. ಅವರು ನಮ್ಮ ಹಾವೇರಿ ಜಿಲ್ಲೆಯವರು. ಉತ್ತಮ ಸೇವೆ ಸಲ್ಲಿಸುತ್ತಾ ಕಾಮನ್ ಮೆನ್ ಸಿಎಂ ಆಗಿದ್ದಾರೆ' ಎಂದು ಗುಣಗಾನ ಮಾಡಿದ ಸುಭುದೇಂದ್ರ ತೀರ್ಥರು, ಸರ್ಕಾರ ಸುಭದ್ರವಾಗಿ ಜನಪರ ಆಡಳಿತ ನೀಡಲಿ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲಿ, ಸಕಾಲಕ್ಕೆ ಮಳೆ ಬೆಳೆಯಾಗಲಿ ಎಂದು ಆಶೀರ್ವಚನ ನೀಡಿದರು.
ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಮಂತ್ರಾಲಯದ ರಾಘವೇಂದ್ರ ಮಠಕ್ಕೆ ಲಕ್ಷಾಂತರ ಜನ ಹೋಗುತ್ತಾರೆ. ಅಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಮೊದಲ ಹಂತದಲ್ಲಿ 5 ಕೋಟಿ ರೂ ಕೊಡಲಾಗಿದೆ. 1.5 ಎಕರೆ ಜಾಗಕ್ಕೆ ನಮ್ಮ ಇಲಾಖೆಯಿಂದ ನೆರವು ಕೊಡುತ್ತೇನೆ ಎಂದರು.
ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ ಎಷ್ಟು ದಿನ ಸುಳ್ಳು ಸುದ್ದಿ ಹಬ್ಬಿಸುತ್ತೀರಿ?: ರೇಣುಕಾಚಾರ್ಯ