ಬೆಂಗಳೂರು: ಎಸ್ಐಟಿ ವಶದಲ್ಲಿರುವ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ. ಆತನಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಎಸ್ಐಟಿ ತಂಡ ಜಯದೇವ ಆಸ್ಪತ್ರೆ ವೈದ್ಯರನ್ನ ಕರೆಸಿ ಚೆಕಪ್ ಮಾಡಿಸುತ್ತಿದೆ.
ಇನ್ನೇನು ನಾಲ್ಕು ದಿನದಲ್ಲಿ ಎಸ್ಐಟಿ ಪಡೆದುಕೊಂಡಿದ್ದ ಕಸ್ಟಡಿಯ ಅವಧಿ ಅಂತ್ಯವಾಗಲಿದೆ. ಆಗಸ್ಟ್ 16 ರವರೆಗೂ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿದ್ದ ಎಸ್ಐಟಿ ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಆದ್ರೆ ವೈದ್ಯರ ಸಲಹೆ ಮೇರೆಗೆ ಮನ್ಸೂರ್ ಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಹೀಗಾಗಿ ಒಮ್ಮೆ ವಿಚಾರಣೆ ಮುಗಿದು ನ್ಯಾಯಾಂಗ ಬಂಧನಕ್ಕೆ ನೀಡಿದ ನಂತರ ಆತನಿಗೆ ಚಿಕಿತ್ಸೆ ನೀಡಲಾಗುತ್ತೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಐಎಂಎ ಕಂಪನಿಯಿಂದ ವಂಚಿತರಾದವರು ತಮ್ಮ ಮೂಲ ಪತ್ರಗಳನ್ನು ವಾಪಸ್ ಪಡೆಯಲು ಎಸ್ಐಟಿ ಕಚೇರಿಗೆ ಬರುತ್ತಿದ್ದಾರೆ. ಐಎಂಎ ನಲ್ಲಿ ಕೆಲಸಕ್ಕೆ ಸೇರುವಾಗ ಸರ್ಟಿಫಿಕೇಟ್ ಮತ್ತು ಮೂಲ ದಾಖಲಾತಿ ಕೊಟ್ಟಿದ್ರು. ಕಳೆದ 2 ತಿಂಗಳಿಂದಲೂ ಐಎಂಎ ಕಚೇರಿಯಲ್ಲೇ ಉಳಿದಿರುವ ತಮ್ಮ ಶೈಕ್ಷಣಿಕ ದಾಖಲಾತಿ ಪತ್ರಗಳಾದ ಮಾರ್ಕ್ಸ್ ಕಾರ್ಡ್ ನ್ನ ಎಸ್ಐಟಿ ಕಚೇರಿಗೆ ಆಗಮಿಸಿ ಅಧಿಕಾರಿಗಳ ಬಳಿಯಿಂದ ಪಡೆಯಲು ಬರ್ತಿದ್ದಾರೆ.
ಆದ್ರೆ ಇಂದು ಪ್ರಕರಣ ಆರೋಪಿ ರೋಷನ್ ಬೇಗ್ ವಿಚಾರಣೆ ಇರುವ ಹಿನ್ನೆಲೆ ಇಂದೂ ಸಹ ಸರ್ಟಿಫಿಕೇಟ್ ಸಿಗೋದು ಡೌಟ್ ಎಂದು ತಿಳಿದು ನಿರಾಸೆಯಿಂದ ವಾಪಸಾಗಿದ್ದಾರೆ.