ಬೆಂಗಳೂರು : ಮಣಿಪಾಲ್ ವಂಚನೆ ಪ್ರಕರಣದ 7 ನೇ ಆರೋಪಿಯಾಗಿರುವ ಬಾಲಾಂಬಲ್ ಶಂಕರನ್ ಎಂಬ ಮಹಿಳೆಯನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ್ ಗ್ರೂಪ್‍ನ ಖಾತೆಗಳಿಂದ ಪ್ರಮುಖ ಆರೋಪಿ ಮಣಿಪಾಲ್ ಗ್ರೂಪಿನ ಮಾಜಿ ಡಿಜಿಎಂ ಫೈನಾನ್ಸ್ ಸಂದೀಪ್ ಗುರುರಾಜ್ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿಕೊಂಡಿದ್ದ 70 ಕೋಟಿ ರೂಪಾಯಿಗಳ ಪೈಕಿ 2.54 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ ಆರೋಪದಲ್ಲಿ ಈಕೆಯನ್ನು ಬಂಧಿಸಲಾಗಿದೆ. ಕಳೆದ ಹಲವು ತಿಂಗಳಿಂದ ಈಕೆ ಬಂಧನದಿಂದ ತಪ್ಪಿಸಿಕೊಳ್ಳಲು ಹಲವು ರೀತಿಯಲ್ಲಿ ಪ್ರಯತ್ನ ನಡೆಸಿದ್ದಳು.
ಚೆನ್ನೈನ ಎಂಬಿಎ ಫೈನಾನ್ಸ್ ಪದವೀಧರೆಯಾಗಿರುವ ಬಾಲಾಂಬಲ್, ಸಂದೀಪ್ ಜತೆ ಸೇರಿ ಷೇರುಮಾರುಕಟ್ಟೆಯಲ್ಲಿ (ನ್ಯಾಚುರಲ್ ಗ್ಯಾಸ್ ಮತ್ತು ಇತರೆ) 2.54 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ್ದಳು. ಸಂದೀಪ್ ತನ್ನ ಪತ್ನಿ ಪಿ ಎನ್ ಚಾರುಸ್ಮಿತಾ ಮತ್ತು ಇತರೆ ಆರೋಪಿಗಳಾದ ಅಮೃತಾ ಚೆಂಗಪ್ಪ, ತಾಯಿ ಮೀರಾ ಚೆಂಗಪ್ಪ ಮತ್ತು ಸೋದರ ವಿಶಾಲ್ ಸೋಮಣ್ಣ ಅವರೊಂದಿಗೆ ಈ ವಂಚನೆ ಪ್ರಕ್ರಿಯೆಯನ್ನು ರೂಪಿಸಿದ್ದ.
ಇದಲ್ಲದೇ ಈ ಕುಕೃತ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಆರೋಪಿಗಳೆಲ್ಲಾ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಬಾಲಾಂಬಲ್ ಮದ್ರಾಸ್ ಹೈಕೋರ್ಟಿನಿಂದ ನಾಲ್ಕು ವಾರಗಳ ನಿರೀಕ್ಷಣಾ ಜಾಮೀನು ಪಡೆದಿದ್ದಳು. ಈ ಅವಧಿ ಮುಗಿದ ನಂತರ ಬೆಂಗಳೂರಿನ ಎಲ್ ಡಿ ಸೆಷನ್ಸ್ ಕೋರ್ಟಿಗೆ ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ ಅರ್ಜಿ 2019ರ ಜೂನ್ 26 ರಂದು ತಿರಸ್ಕೃತಗೊಂಡಿತ್ತು.
ಮುಖ್ಯ ಆರೋಪಿಯು ವಂಚನೆ ಮಾಡಿದ ಹಣವನ್ನು ವರ್ಗಾವಣೆ ಮಾಡಲು ಈಕೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಳು. ಅಲ್ಲದೆ ಎಲೆಕ್ಟ್ರಾನಿಕ್ ಪುರಾವೆಗಳನ್ನು ನಾಶಪಡಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಸಂದೀಪ್ ಗುರುರಾಜ್ ಮತ್ತು ಬಾಲಾಂಬಲ್‍ನ ಕುಟುಂಬಗಳು ವಾರ್ಷಿಕ ಪ್ರವಾಸಗಳನ್ನು ಮಾಡಿ ಪ್ರೀಮಿಯಂ ರೆಸಾರ್ಟ್‍ಗಳಲ್ಲಿ ತಂಗುತ್ತಿದ್ದರು ಎಂದು ತಿಳಿದುಬಂದಿದೆ.
ಸರ್ಕಾರಿ ಆಡಳಿತ ವ್ಯವಸ್ಥೆಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಇವರಿಬ್ಬರು ತಮ್ಮ ಪರಿಚಯದ ತಮಿಳುನಾಡಿನ ಅಧಿಕಾರಿ ಮತ್ತು ನಿವೃತ್ತ ನ್ಯಾಯಾಧೀಶರ ಮೂಲಕ ಸ್ಥಳೀಯ ಪೊಲೀಸರ ಮೇಲೆ ಪ್ರಭಾವ ಬೀರಿ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂದು ಕಬ್ಬನ್ ಪಾರ್ಕ್ ಪೊಲೀಸರು ತಿಳಿಸಿದ್ದಾರೆ.