ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಮಂಡ್ಯ ಕೈ ನಾಯಕರಿಗೆ ಸೂಚನೆ ನೀಡಲು ತಡರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ ಅಪೂರ್ಣವಾಗಿದೆ.
ಇದೇ ಸಂದರ್ಭ ಮಂಡ್ಯ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಜತೆ ಮಾತನಾಡಿ, ನಮ್ಮ ಬೆಂಬಲ ಬೇಡ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಾವೇಕೆ ಕೆಲಸ ಮಾಡೋಣ ಎಂದು ಪ್ರಶ್ನೆ ಹಾಕಿದರು. ಇದರಿಂದ ಮುಂದಿನ ಶನಿವಾರ ಇನ್ನೊಮ್ಮೆ ಸಭೆ ಮಾಡಲು ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ.
ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ನಡೆದ ಸಭೆಯಲ್ಲಿ ಮಂಡ್ಯ ಜಿಲ್ಲೆಯ ಎಂಟು ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸ್ಫರ್ಧೆ ಹಿನ್ನೆಲೆ ಮಂಡ್ಯ ಕಾಂಗ್ರೆಸ್ ಮುಖಂಡರು ಸುಮಲತಾ ಪರ ಇದ್ದಾರೆ ಎಂಬ ಊಹಪೋಹ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಭೆ ಅತ್ಯಂತ ಮಹತ್ವ ಪಡೆದಿತ್ತು. ಮಂಡ್ಯ ಕಾಂಗ್ರೆಸ್ ಮುಖಂಡರ ಬಂಡಾಯ ಶಮನಕ್ಕೆ ಸಿದ್ದರಾಮಯ್ಯ ಯತ್ನಿಸಿ ನಿನ್ನೆ ವಿಫಲರಾದರು.
ಸಿದ್ದರಾಮಯ್ಯ ಮೇಲೆ ಜವಾಬ್ದಾರಿ:
ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಇವರ ಮೇಲೆ ಹೈಕಮಾಂಡ್ ಒತ್ತಡ ಹೇರಿದೆ. ಈ ಹಿನ್ನೆಲೆ ಸಭೆ ನಡೆಸಿ ಮಾಜಿ ಶಾಸಕ ಚೆಲುವರಾಯಸ್ವಾಮಿ ಮತ್ತು ಬಂಡಿ ಸಿದ್ದೇಗೌಡ ಸೇರಿದಂತೆ ಪ್ರಮುಖ ಮುಖಂಡರ ಮನವೊಲಿಸಲು ಸಿದ್ದರಾಮಯ್ಯ ಯತ್ನಿಸಿದರು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಮಾಜಿ ಶಾಸಕ ಚೆಲುವರಾಯಸ್ವಾಮಿ, ಬಂಡಿಸಿದ್ದೇಗೌಡ ಮತ್ತು ಅರವಿಂದ ಸಾಗರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ರು.
ಏನೆಲ್ಲಾ ಚರ್ಚೆ ಮಾಡಬೇಕೋ ಮಾಡಿದ್ದಾರೆ :
ಸಭೆ ಬಳಿಕ ಮಾಜಿ ಶಾಸಕ ಚೆಲುವರಾಯಸ್ವಾಮಿ ಮಾತನಾಡಿ, ಚುನಾವಣಾ ವಿಚಾರವಾಗಿ ಚರ್ಚೆ ಮಾಡಿದ್ರು. ಏನೆಲ್ಲಾ ಚರ್ಚೆ ಮಾಡಬೇಕೋ ಅದನ್ನ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಬಂಡಾಯ ಶಮನ ವಿಚಾರವಾಗಿ ಎಲ್ಲವನ್ನೂ ಮಾತನಾಡಿದ್ದಾರೆ ಅಂತಾ ತಿಳಿಸಿದ್ರು. ಇನ್ನು ಸುಮಲತಾ ಪರ ಪ್ರಚಾರ ಮಾಡ್ತಿರಾ ಅಥವಾ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಯಾವುದೇ ಪೇಪರ್, ಟಿವಿಯಲ್ಲಿ ಹೇಳಿಲ್ಲ. ನಮ್ಮನ್ನ ಜಾತ್ಯಾತೀತ ಜನತಾ ದಳದವರು ಯಾವ ಕಾರ್ಯಕ್ರಮಕ್ಕೂ ಕರೆಯಬೇಡಿ ಅಂತಾ ನಿಮ್ಮ ಮುಂದೆನೇ ಹೇಳಿದ್ದಾರೆ. ಅವರೆಲ್ಲಾ ದೊಡ್ಡವರು. ನಮಗೂ ಅವರಿಗೂ ಅಜಗಜಾಂತರ. ಅವರು ಆನೆ ಥರ, ನಾವು ಇಲಿ ಥರ. ಅವರ ಪ್ರಶ್ನೆಗೆ, ಹೇಳಿಕೆಗೆ ಪ್ರತಿಕ್ರಿಯಿಸುವುದಕ್ಕೆ ನಾನು ದೊಡ್ಡವನಲ್ಲ ಎಂದರು.