ಬೆಂಗಳೂರು: ಮಸಾಜ್ ಮಾಡುವ ಸೋಗಿನಲ್ಲಿ ಆನ್ಲೈನ್ನಲ್ಲಿ ಗ್ರಾಹಕರನ್ನು ಸೆಳೆದು ಯುವತಿಯರಿಂದ ಆಶ್ಲೀಲವಾಗಿ ಪೋಟೊ ತೆಗೆದು ಅಮಾಯಕ ಯುವಕರನ್ನು ಹೆದರಿಸಿ ಸಾವಿರಾರು ರೂ. ವಸೂಲಿ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಕುಮಾರಸ್ವಾಮಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ್, ರಘು, ಮೈಕಲ್ ರಾಜ್, ಸೆಲ್ವರಾಜ್, ತಿಮ್ಮಪ್ಪ, ಮನುಕುಮಾರ್ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆಸಲಾಗಿದೆ.
ಕಳೆದ ಜನವರಿ 11ರಂದು ಕುಮಾರಸ್ವಾಮಿ ಲೇಔಟ್ನಲ್ಲಿ 38 ವರ್ಷದ ಯುವಕ ಆನ್ಲೈನ್ನಲ್ಲಿ ಮಸಾಜ್ ಮಾಡಿಸಿಕೊಳ್ಳಲು ಹುಡುಕುತ್ತಿದ್ದಾಗ ಆರೋಪಿಗಳ ನಂಬರ್ ಲಭ್ಯವಾಗಿದ್ದು, ಇದರ ಆಧಾರದ ಮೇಲೆ ಯುವಕನ ಮೊಬೈಲ್ಗೆ ಕಾಲ್ ಮಾಡಿದ್ದಾನೆ.
ಓದಿ: ಶಿವಮೊಗ್ಗ: ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ... ನಾಲ್ವರ ಸಾವು, ಮೃತರ ಸಂಖ್ಯೆ ಹೆಚ್ಚಾಗುವ ಶಂಕೆ!
ಕರೆ ಸ್ವೀಕರಿಸಿದ ಪಾರ್ಲರ್ನವರು ಜಯನಗರ ಬಳಿ ಬರುವಂತೆ ತಿಳಿಸಿದ್ದಾರೆ. ನಂತರ ಕಾರಿನಲ್ಲಿ ಯುವತಿಯನ್ನ ತೋರಿಸಿ 15 ಸಾವಿರ ಹಣ ಪಡೆದಿದ್ದಾರೆ. ಮನೆಯಲ್ಲೇ ಮಸಾಜ್ ಮಾಡುತ್ತೇವೆಂದು ಕೆಎಸ್ ಲೇಔಟ್ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಮಸಾಜ್ ಮಾಡುವ ನೆಪದಲ್ಲಿ ಯುವಕನೊಂದಿಗೆ ಮಹಿಳೆ ಆಶ್ಲೀಲ ಭಂಗಿಯಲ್ಲಿ ಫೋಟೊ ತೆಗೆಯಿಸಿಕೊಂಡಿದ್ದಾಳೆ. ನಂತರ ಇದೇ ಫೋಟೋಗಳನ್ನ ತೋರಿಸಿ ನಾಲ್ಕು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ.
ಹಣ ಕೊಡದಿದ್ದರೆ ಫೋಟೊಗಳನ್ನ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ತೋರಿಸಿ ಮಾನ ಕಳೆಯುತ್ತೇವೆ ಎಂದ ಬೆದರಿಸಿದ್ದಾರೆ. ಹಲವು ಸಲ ಮನವಿ ಮಾಡಿಕೊಂಡ್ರೂ ಬಿಡದ ದುಷ್ಕರ್ಮಿಗಳು ಯುವಕನನ್ನು ಕಾರಿನಲ್ಲಿ ಕರೆದೊಯ್ದು ಆತನ ಎಟಿಎಂನಿಂದ 50 ಸಾವಿರ ರೂ.ವಿತ್ ಡ್ರಾ ಮಾಡಿಸಿದ್ದಾರೆ. ನಂತರ ಯುವಕನ ಗೆಳೆಯ ನವೀನ್ ಎಂಬುವವನಿಗೆ ಕರೆ ಮಾಡಿಸಿ ಜಯನಗರದ ದ್ವಾರಕಾ ಹೋಟೆಲ್ಗೆ ಒಂದು ಲಕ್ಷ ಹಣ ತರಿಸಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಯುವಕನ ಮೈಮೇಲಿದ್ದ ಚಿನ್ನದ ಉಂಗುರ ಚಿನ್ನದ ಸರ ಹಾಗೂ ವಾಚ್ನ್ನು ಕಿತ್ತುಕೊಂಡು ಕಳಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಸಂತ್ರಸ್ಥ ಯುವಕ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.