ಬೆಂಗಳೂರು: ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಆರ್ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಡದ ತಪ್ಪಿಗೆ ಗಾಂಜಾ ಕೇಸ್ನಲ್ಲಿ ಫಿಟ್ ಮಾಡಿದ್ದಾರೆ ಎಂದು ವ್ಯಕ್ತಿ ದೂರಿದ್ದಾನೆ.
ಯಶವಂತಪುರ ನಿವಾಸಿ ಶಿವರಾಜ್ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಪೊಲೀಸರು ಠಾಣೆಗೆ ಕರೆದೊಯ್ದು ಸಿಗರೇಟ್ನಲ್ಲಿ ಗಾಂಜಾ ತುಂಬಿ ಬೇಡವೆಂದರೂ ಬಲವಂತವಾಗಿ ಸೇವಿಸಲು ಹೇಳಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಮೆಡಿಕಲ್ ಟೆಸ್ಟ್ ಮಾಡಿಸಿದರು. ನಂತರ ಕರೆದಾಗ ಬರಬೇಕು ಅಂತ ಹೇಳಿ ಕಳುಹಿಸಿದ್ದರು ಎಂದು ವಿಡಿಯೋ ಮೂಲಕ ವ್ಯಕ್ತಿ ಆರೋಪ ಮಾಡಿದ್ದಾನೆ.
ಮನೆ ಮುಂದೆ ಕೂತಿದ್ದವನನ್ನು ಕರೆದೊಯ್ದು ಪೊಲೀಸರೇ ಸಿಗರೇಟ್ ಸೇದಿಸಿದ್ರು. ಸರ್ ಸಿಗರೇಟ್ನಲ್ಲಿ ಗಾಂಜಾ ವಾಸನೆ ಬರುತ್ತಿದೆ ಎಂದರೂ ಬಿಡದೇ ಸಿಗರೇಟ್ ಸೇದುವಂತೆ ಬಲವಂತ ಮಾಡಿದ್ರು. ಹೀಗಾಗಿ ಈ ಘಟನೆಯಿಂದ ಮುಂದೆ ನನ್ನ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಶಿವರಾಜ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಪೊಲೀಸರು ಸುಖಾ ಸುಮ್ಮನೆ ಕರೆದೊಯ್ದು ಈ ರೀತಿ ಮಾಡಿರುವುದರಿಂದ ನೆರೆಹೊರೆಯವರು ಗಾಂಜಾ ಕೇಸ್ ಎನ್ನುತ್ತಿದ್ದಾರೆ ಎಂದು ಬೆಂಗಳೂರು ನಗರದ ಆರ್.ಎಂ.ಸಿ ಯಾರ್ಡ್ ಠಾಣಾ ಪೊಲೀಸರ ವಿರುದ್ಧ ಶಿವರಾಜ್ ಗಂಭೀರ ಆರೋಪ ಹೊರಿಸಿದ್ದಾನೆ. ಮಾಹಿತಿ ಪ್ರಕಾರ ಶಿವರಾಜ್ಗೆ ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.