ಬೆಂಗಳೂರು: ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಸತ್ಯಾಂಶ ಹೊರಬರಬೇಕಿದೆ. ಇದರಿಂದ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ನಡೆಸಬೇಕು ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಮಿಟಿ ರಚಿಸಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ಬಳಿಯೂ ಕೇಳಿದ್ದೇನೆ. ರಿಪೋರ್ಟ್ ಬಂದ ಮೇಲೆ ನಿಮ್ಮ ಗಮನಕ್ಕೆ ತರುತ್ತೇವೆ ಅಂದಿದ್ದಾರೆ. ಹೀಗಿರುವಾಗ ನಾನು ಮಾತನಾಡಲಿಲ್ಲ. ಇದಕ್ಕೆ ತನ್ನ ಮೇಲೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
ಒಬ್ಬ ಶಾಸಕನ ಮೇಲೆ ದಾಳಿ ನಡೆದಿದೆ. ಸರ್ಕಾರ ಶಾಸಕರಿಗೆ ರಕ್ಷಣೆ ನೀಡಬೇಕು. ಅವರ ನಿವಾಸ ದೂರದಲ್ಲೇನೂ ಇಲ್ಲ. ವಿಧಾನಸೌಧ, ಪೊಲೀಸ್ ಆಯುಕ್ತರ ಕಚೇರಿಗೆ ದೂರದಲ್ಲೇನು ಇರಲಿಲ್ಲ. ಅವರಿಗೆ ಸಂಪೂರ್ಣ ರಕ್ಷಣೆ ಕೊಡಬಹುದಿತ್ತು ಎಂದು ಪರೋಕ್ಷವಾಗಿ ಪೊಲೀಸ್ ಇಲಾಕೆ ವೈಫಲ್ಯದ ಕುರಿತು ಗುಡುಗಿದರು.
ಒಟ್ಟಾರೆ ದಲಿತ ಶಾಸಕನ ಮೇಲೆ ದಾಳಿ ನಡೆದ ಸಂದರ್ಭದಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಮೌನ ವಹಿಸಿದ್ದಕ್ಕೆ ಸಾಕಷ್ಟು ಆರೋಪಗಳು ಬಿಜೆಪಿ ನಾಯಕರಿಂದ ಕೇಳಿ ಬಂದಿತ್ತು. ಇದೀಗ ಖರ್ಗೆ ಶಾಸಕರ ಪರವಾಗಿ ಮಾತನಾಡುವ ಮೂಲಕ ಆರೋಪಗಳಿಗೆ ಉತ್ತರ ನೀಡಿದ್ದಾರೆ.