ಬೆಂಗಳೂರು : ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕೊಟ್ಟ ಖಡಕ್ ಸೂಚನೆ ನೀಡಿದ ಬೆನ್ನಲ್ಲೇ ನಗರದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನೂತನ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸಭೆ ಕರೆದಿದ್ದರು. ಈ ಸಭೆ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರನ್ನು ' ರೌಡಿಸಂ ಮುಕ್ತ ಮಾಡುವುದು ನಮ್ಮ ಮೊದಲ ಆದ್ಯತೆ. ನಂತರ ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡುತ್ತೇವೆ. ನಗರದಲ್ಲಿ ನಡೆಯುವ ಯಾವುದೇ ಅಕ್ರಮ ಚಟುವಟಿಕೆಗಳನ್ನ ಸಹಿಸುವುದಿಲ್ಲ ಎಂದರು.
ಸಾರ್ವಜನಿಕರೊಂದಿಗೆ ಪೊಲೀಸರು ಜನಸ್ನೇಹಿ ಮತ್ತು ಉತ್ತಮ ವರ್ತನೆ ತೋರುವುದು ಸಹ ಕಡ್ಡಾಯವಾಗಬೇಕು. ಸಿಬ್ಬಂದಿಗಳ ದೈಹಿಕ ಸಾಮರ್ಥ್ಯದ ಬಗ್ಗೆಯೂ ಗಮನ ಹರಿಸಲಾಗುವುದು. ಯಾರಿಗೂ ಬೆಂಗಳೂರಿನಲ್ಲಿ ಸಮಸ್ಯೆಯುಂಟು ಮಾಡಲು ಅವಕಾಶ ನೀಡುವುದಿಲ್ಲ. ಸಂಚಾರಿ ವ್ಯವಸ್ಥೆಯ ಬಗ್ಗೆಯೂ ಸಾಕಷ್ಟು ಚರ್ಚೆ ಮಾಡಲಾಗಿದೆ ಎಂದು ಅಲೋಕ್ ಮೋಹನ್ ತಿಳಿಸಿದರು.
ಇದನ್ನೂ ಓದಿ : ನಮ್ಮಲ್ಲಿ ಇರುವುದು ಒಂದೇ ಬಣ, ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ: ರಾಮಲಿಂಗಾರೆಡ್ಡಿ
ಇಂದು ಇನ್ಫ್ಯಾಂಟ್ರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ಸೇರಲಾಗಿದ್ದು, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಹೆಚ್ಚುವರಿ ಆಯುಕ್ತರು, ಡಿಐಜಿಗಳು ಹಾಗೂ ನಗರದ ಎಲ್ಲಾ ಡಿಸಿಪಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ನೂತನ ಡಿಜಿ & ಐಜಿಪಿ ಆಗಿ ಅಲೋಕ್ ಮೋಹನ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಪ್ರಮುಖ ನಾಲ್ಕು ಪ್ರಕರಣಗಳಿಗೆ ಮರುಜೀವ ನೀಡಿದ್ದಾರೆ. ಕಾಟನ್ ಪೇಟೆ ಠಾಣೆಯಲ್ಲಿ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ದಾಖಲಾಗಿದ್ದ ನಕಲಿ ದರೋಡೆ ಪ್ರಕರಣ, ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣ, ಬಿಟ್ ಕಾಯಿನ್ ದಂಧೆ ಪ್ರಕರಣ ಹಾಗೂ ನಾಗವಾರ ಬಳಿ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.
ಈ ನಾಲ್ಕು ಪ್ರಕರಣಗಳ ತನಿಖಾ ಹಂತ ಮತ್ತು ಸ್ಥಿತಿಗತಿಗಳ ಬಗ್ಗೆ ಅಲೋಕ್ ಮೋಹನ ಮಾಹಿತಿ ಪಡೆದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಸಿಎಂ ಹಾಗೂ ಡಿಸಿಎಂ, ನೈತಿಕ ಪೊಲೀಸ್ ಗಿರಿ ಮತ್ತು ಇಲಾಖೆ ಕೇಸರಿಕರಣವಾಗುತ್ತಿದೆ ಎಂದು ಗರಂ ಆಗಿದ್ದರು. ಆದ್ದರಿಂದ ಈ ಎಲ್ಲಾ ವಿಚಾರಗಳ ಜೊತೆಗೆ ನಗರದ ಕಾನೂನು ಸುವ್ಯವಸ್ಥೆ, ರೌಡಿ ಚಟುವಟಿಕೆ, ಡ್ರಗ್ಸ್ ನಿಯಂತ್ರಣ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅಧಿಕಾರಿಗಳ ಮೇಲಿನ ಆರೋಪಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಅಲ್ಲದೇ ಸಾರ್ವಜನಿಕರೊಂದಿಗೆ ಪೊಲೀಸರು ಉತ್ತಮವಾಗಿ ನಡೆದುಕೊಳ್ಳಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಅಲೋಕ್ ಮೋಹನ್ ನೀಡಿದ್ದಾರೆ.
ಇದನ್ನೂ ಓದಿ : ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ಪುನರ್ ಪರಿಶೀಲನೆ, ಹಿಜಾಬ್ಗೆ ಅವಕಾಶ ನೀಡಿದರೆ ಹೋರಾಟ: ಅಶ್ವತ್ಥನಾರಾಯಣ್