ಬೆಂಗಳೂರು: ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ನಿಷೇಧ ಅಭಿಯಾನದ ಅಂಗವಾಗಿ ಇಂದಿನಿಂದ ಕೆಎಸ್ಆರ್ಟಿಸಿ ಎಸಿ ಬಸ್ಗಳಲ್ಲಿ ಉಚಿತ ನೀರಿನ ಬಾಟಲಿ ನೀಡುವುದನ್ನು ಸ್ಥಗತಿಗೊಳಿಸಲಾಗಿದೆ. ಪುನರ್ ಬಳಕೆಯ ನೀರಿನ ಬಾಟಲಿಯೊಂದಿಗೆ ಎಸಿ ಬಸ್ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಕೆಎಸ್ಆರ್ಟಿಸಿಗೆ ಟ್ಯಾಗ್ ಮಾಡಿದರೆ ಉಚಿತ ಪ್ರಯಾಣದ ಭರ್ಜರಿ ಆಫರ್ ಅನ್ನು ಸಾರಿಗೆ ಸಂಸ್ಥೆ ಘೋಷಿಸಿದೆ.
ಕೆಎಸ್ಆರ್ಟಿಸಿಯ ಹವಾನಿಯಂತ್ರಿತ ಬಸ್ ಪ್ರಯಾಣಿಕರು ಇಂದಿನಿಂದ ತಮ್ಮೊಂದಿಗೆ ನೀರಿನ ಬಾಟಲಿ ಕೊಂಡೊಯ್ಯಬೇಕಿದೆ. ಇಂದಿನಿಂದಲೇ ಅನ್ವಯವಾಗುವಂತೆ ಸಾರಿಗೆ ಸಂಸ್ಥೆ ನೀಡುತ್ತಿದ್ದ ಉಚಿತ ನೀರಿನ ಬಾಟಲ್ ವಿತರಣೆಯನ್ನು ಸ್ಥಗಿತಗೊಳಿಸಿದೆ. ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದರಿಂದ ಕೆಎಸ್ಆರ್ಟಿಸಿ ಕೂಡ ಪರಿಸರ ಕಾಳಜಿಗೆ ಕೈ ಜೋಡಿಸಿದೆ.
ಬಳಸಿ ಎಸೆಯುವ ಪ್ಲಾಸ್ಟಿಕ್ ಬಳಕೆ ನಿರ್ಬಂಧಿಸಿ ಪುನರ್ ಬಳಕೆಯ ಪ್ಲಾಸ್ಟಿಕ್ ಬಾಟಲ್ ಬಳಕೆ ಉತ್ತೇಜಿಸಲು ಮುಂದಾಗಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 'ಸೆಲ್ಫಿ ವಿತ್ ಮೈ ಓನ್ ಬಾಟಲ್' ಸ್ಪರ್ಧೆ ಆಯೋಜಿಸಿದೆ. ಸಂಸ್ಥೆಯ ಪ್ರೀಮಿಯರ್ ಬಸ್ಸಿನಲ್ಲಿ ತಮ್ಮ ನೀರಿನ ಬಾಟಲಿ ಜೊತೆ ಸೆಲ್ಫಿ ತೆಗೆದು ಪೋಸ್ಟ್ ಮಾಡಿದರೆ ಅತ್ಯುತ್ತಮ ಪೋಸ್ಟ್ಗೆ ಮಕ್ಕಳು, ಯುವ ಸಮೂಹ ಮತ್ತು ಹಿರಿಯ ನಾಗರಿಕರ ವಿಭಾಗದಲ್ಲಿ ಒಂದು ಮಾರ್ಗದಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ ಪ್ರೀಮಿಯರ್ ಬಸ್ನಲ್ಲಿ ಉಚಿತ ಪ್ರಯಾಣದ ಭರ್ಜರಿ ಆಫರ್ ಪ್ರಕಟಿಸಲಾಗಿದೆ.
ಸದ್ಯ ಸಾರಿಗೆ ಸಂಸ್ಥೆಯ 8800 ಬಸ್ಗಳಲ್ಲಿ 300 ಹವಾನಿಯಂತ್ರಿತ ಬಸ್ ಸೇವೆಯಲ್ಲಿ ಉಚಿತ ಕುಡಿಯುವ ನೀರಿನ ಬಾಟಲಿ ಸೇವೆ ನೀಡುತ್ತಿದ್ದು, ಮೂರು ನಿಗಮ ಸೇರಿ 450 ಬಸ್ಗಳಲ್ಲಿ ಪ್ರತಿ ವರ್ಷ 1.20 ಕೋಟಿ ಬಾಟಲ್ಗಳನ್ನು ಪ್ರಯಾಣಿಕರಿಗೆ ವಿತರಣೆ ಮಾಡುತ್ತಿದೆ. ಇಷ್ಟು ಬಾಟಲ್ ಭೂ ಒಡಲು ಸೇರುತ್ತಿದ್ದು, ಇಂದಿನಿಂದ ಇದಕ್ಕೆ ಸಾರಿಗೆ ಸಂಸ್ಥೆ ಬ್ರೇಕ್ ಹಾಕಿ ಪರಿಸರ ಕಾಳಜಿ ಮೆರೆಯಲು ಹೊರಟಿದೆ.
ಇಷ್ಟು ಮಾತ್ರವಲ್ಲದೇ ಪ್ರೀಮಿಯರ್ ಬಸ್ಗಳಲ್ಲಿ ಕಸದ ಚೀಲ ಇಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರಿಚಯ ಮಾಡುತ್ತಿದೆ. ಪ್ರಯಾಣಿಕರು ತಿಂದು ಬಿಸಾಡುವ ಆಹಾರದ ಪೊಟ್ಟಣಗಳನ್ನು ಚೀಲದಲ್ಲಿ ಹಾಕಿ ಸ್ವಚ್ಛತೆ ಕಾಪಾಡುವ ಜೊತೆ ಪರಿಸರ ಸಂರಕ್ಷಣೆಯ ಪ್ರಯತ್ನಕ್ಕೆ ಕೈಜೋಡಿಸುತ್ತಿದೆ.