ಬೆಂಗಳೂರು: ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಮಹಾಘಟಬಂಧನ್ ಮುಂದುವರಿಯಲಿದೆ ಎಂದು ತಮಿಳುನಾಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಟ್ವೀಟ್ ಮೂಲಕ ಈ ಮಾಹಿತಿ ನೀಡಿರುವ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಹಾಗೂ ಇತರೆ ಪಕ್ಷಗಳ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಇದರಿಂದಾಗಿ 2019ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು. ಇದೀಗ ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರೆಯಲಿದೆ. ಈ ಮಹಾಘಟಬಂಧನ್ ಅನ್ನು ಬಲಿಷ್ಠಗೊಳಿಸಲು ಕಾಂಗ್ರೆಸ್ ತನ್ನದೇ ಬಹುಮುಖ್ಯ ಪಾತ್ರ ನಿಭಾಯಿಸಲಿದೆ ಎಂದು ತಿಳಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಪಕ್ಷದ ಎಂಕೆ ಸ್ಟ್ಯಾಲಿನ್ ನೇತೃತ್ವದ ಕಾಂಗ್ರೆಸ್ ಒಳಗೊಂಡ ಮಹಾಘಟಬಂಧನ್ 38 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿತ್ತು. ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಹಾಗೂ ಎನ್ಡಿಎ ಮೈತ್ರಿಕೂಟ ಕೇವಲ ಒಂದು ಸ್ಥಾನ ಮಾತ್ರ ಗೆದ್ದಿತ್ತು.
ಇದೀಗ ಬಿಹಾರದಲ್ಲಿ ಮಹಾಘಟಬಂಧನ್ ವಿಫಲವಾದ ಹಿನ್ನೆಲೆ ತಮಿಳುನಾಡಿನಲ್ಲಿಯೂ ಕಾಂಗ್ರೆಸ್ ಪ್ರತ್ಯೇಕವಾಗಿ ಚುನಾವಣೆ ಎದುರಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಲೋಕಸಭೆ ಯಶಸ್ಸು ವಿಧಾನಸಭೆ ಚುನಾವಣೆಯಲ್ಲಿ ಮುಂದುವರಿಯಲಿದೆ ಎಂದು ಹೇಳುವ ಮೂಲಕ ದಿನೇಶ್ ಗುಂಡೂರಾವ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.