ಬೆಂಗಳೂರು : ರಾತ್ರಿ ಪಾಳಿಯಲ್ಲಿ ನಿದ್ರಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ರನ್ನು ಕರ್ತವ್ಯಲೋಪದ ಆರೋಪದಡಿ ಅಮಾನತುಗೊಳಿಸಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಆದೇಶಿಸಿದ್ದಾರೆ. ಮಹದೇವಪುರ ಠಾಣೆಯ ಹೆಡ್ ಕಾನ್ಸ್ಟೇಬಲ್ ಜಯರಾಮ್ ಎ.ಎನ್ ಹಾಗೂ ಕಾನ್ಸ್ಟೇಬಲ್ ಈರಪ್ಪ ಉಂಡಿ ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿ.
ಜುಲೈ 9ರಂದು ರಾತ್ರಿ ಠಾಣೆಯ ಎಸ್ಎಚ್ಓ ಪ್ರಭಾರದಲ್ಲಿದ್ದಾಗ ಹೆಡ್ ಕಾನ್ಸ್ಟೇಬಲ್ ಜಯರಾಮ್ ಎ.ಎನ್ ಹಾಗೂ ಕಾನ್ಸ್ಟೇಬಲ್ ಈರಪ್ಪ ಉಂಡಿ ರಾತ್ರಿ ಪಾಳಿಯಲ್ಲಿದ್ದರು. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಸಿಎಆರ್ (ನಗರ ಸಶಸ್ತ್ರ ಮೀಸಲು) ಡಿಸಿಪಿಯವರು ಠಾಣೆಗೆ ಭೇಟಿ ನೀಡಿದಾಗ ಇಬ್ಬರೂ ಸಿಬ್ಬಂದಿ ನಿದ್ರಿಸುತ್ತಿರುವುದು ಕಂಡು ಬಂದಿದೆ. ಅಲ್ಲದೆ ಠಾಣೆಯ ಸೆಂಟ್ರಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಹೆಸರನ್ನು ಕೇಳಿದಾಗ, 'ಯಾರು ಎಂಬುದು ಗೊತ್ತಿಲ್ಲ' ಎಂದು ಉತ್ತರಿಸಿರುವುದರಿಂದ, ಶಿಸ್ತಿನ ಇಲಾಖೆಯ ನೌಕರರಾಗಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನ ಪ್ರದರ್ಶಿಸಿರುವ ಆರೋಪದಡಿ ಇಬ್ಬರೂ ಸಿಬ್ಬಂದಿಗಳನ್ನು ತಕ್ಷಣವೇ ಅಮಾನತುಗೊಳಿಸಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಆದೇಶ ಹೊರಡಿಸಿದ್ದಾರೆ.
ಆದೇಶ ಪ್ರತಿಯಲ್ಲಿ ಏನಿದೆ ? : ಜುಲೈ 9ರಂದು ರಾತ್ರಿ ಮಹದೇವಪುರ ಠಾಣೆಯ ಹೆಡ್ ಕಾನ್ಸ್ಟೇಬಲ್ ಜಯರಾಮ್ ಎ.ಎನ್ ಹಾಗೂ ಕಾನ್ಸ್ಟೇಬಲ್ ಈರಪ್ಪ ಉಂಡಿ ಅವರು ಠಾಣೆಯ ಎಸ್ಹೆಚ್ಒ ಪ್ರಭಾರದಲ್ಲಿದ್ದಾಗ ರಾತ್ರಿ ಗಸ್ತು ಕರ್ತವ್ಯದಲ್ಲಿ ಮಹದೇವಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ನಿದ್ರಿಸುತ್ತಿದ್ದರು. ಈ ವೇಳೆ ಹೆಡ್ ಕಾನ್ಸ್ಟೇಬಲ್ ಜಯರಾಮ್ ಅವರನ್ನು ಸೆಂಟ್ರಿ ಕರ್ತವ್ಯದಲ್ಲಿರುವ ಸಿಬ್ಬಂದಿಯ ಹೆಸರನ್ನು ಕೇಳಿದಾಗ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಶಿಸ್ತಿನ ಇಲಾಖೆಯ ಜವಾಬ್ದಾರಿಯುತ ನೌಕರರಾಗಿದ್ದುಕೊಂಡು ಠಾಣಾ ಎಸ್ಹೆಚ್ಓ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ನಿದ್ರಿಸುತ್ತಿರುವುದು ಕಂಡುಬಂದಿರುತ್ತದೆ. ಈ ರೀತಿ ಕರ್ತವ್ಯದಲ್ಲಿ ಅತೀವ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿಯನ್ನು ಪ್ರದರ್ಶಿಸಿರುತ್ತೀರಿ. ಈ ಸಂಬಂಧ ಹೆಡ್ ಕಾನ್ಸ್ಟೇಬಲ್ ಜಯರಾಮ್ ಎ.ಎನ್ ಹಾಗೂ ಕಾನ್ಸ್ಟೇಬಲ್ ಈರಪ್ಪ ಉಂಡಿ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿ) ನಿಯಮಗಳು 1965/22 ನಿಯಮ 5(1)ರಂತೆ ಮುಂದಿನ ಇಲಾಖಾ ವಿಚಾರಣೆ ಬಾಕಿ ಇರಿಸಿಕೊಂಡು ಅಮಾನತುಗೊಳಿಸಲಾಗಿದೆ. ಅಮಾನತಿನ ಅವಧಿಯಲ್ಲಿ ಜೀವನಾಧಾರ ಭತ್ಯೆಗೆ ಅರ್ಹರಾಗಿದ್ದೀರಿ. ಅಮಾನತಿಗೆ ಮುಂಚೆ ಯಾರ ನಿಯಂತ್ರಣಕ್ಕೊಳಪಟ್ಟಿದ್ದೀರೋ ಅಮಾನತ್ತಿನ ಅವಧಿಯಲ್ಲಿಯೂ ಅದೇ ಅಧಿಕಾರಿಯ ನಿಯಂತ್ರಣದಲ್ಲಿ ಮುಂದುವರೆಯುತ್ತೀರಿ ಎಂದು ಉಲ್ಲೇಖಿಸಲಾಗಿದೆ.
ಅಶೋಕನಗರ ಠಾಣೆ ಇನ್ಸ್‌ಪೆಕ್ಟರ್ ಅಮಾನತು : ಪಬ್ ಮತ್ತು ಬಾರ್ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಅಶೋಕ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಕಾಂತ್ ಎಫ್. ತೋಟಗಿ ಅವರನ್ನು ಇತ್ತೀಚೆಗೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿತ್ತು. ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಅಮಾನತುಗೊಳಿಸಿ ಆದೇಶಿಸಿದ್ದರು.
ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವಧಿ ಮೀರಿ ಹೋಟೆಲ್ ಕಾರ್ಯ ನಿರ್ವಹಣೆ ಹಾಗೂ ಯುವತಿಯರನ್ನು ಇರಿಸಿಕೊಂಡು ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪದಡಿ ಇನ್ಸ್‌ಪೆಕ್ಟರ್ ಶ್ರೀಕಾಂತ್ ಎಫ್. ತೋಟಗಿ ಅವರನ್ನು ಅಮಾನತುಗೊಳಿಸಲಾಗಿತ್ತು.
ಇದನ್ನೂ ಓದಿ : ಕರ್ತವ್ಯ ಲೋಪ ಆರೋಪದಡಿ ಅಶೋಕನಗರ ಠಾಣೆಯ ಇನ್ಸ್‌ಪೆಕ್ಟರ್ ಅಮಾನತು