ಬೆಂಗಳೂರು: ರಾಜ್ಯದಲ್ಲಿ ಕಾನೂನಿದೆ, ಸರ್ಕಾರವೂ ಇದೆ. ಯಶವಂತಪುರ ಕ್ಷೇತ್ರದ ಅಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮಕ್ಕಳ ಕೈಯಿಂದಲೇ ಶೌಚಾಲಯ ಸ್ವಚ್ಛ ಮಾಡಿಸಿಕೊಂಡ ಶಿಕ್ಷಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಶಿಕ್ಷಕರ ಸದನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಕೃತ್ಯವನ್ನು ಖಂಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧವಾಗಿ ಕ್ರಮ ವಹಿಸಲಾಗುತ್ತದೆ. ಯಾವ ಕಾರಣಕ್ಕೂ ಕ್ರಮದ ವಿಚಾರದಲ್ಲಿ ಸ್ವಲ್ಪವೂ ಹಿಂಜರಿಯುವುದಿಲ್ಲ. ಮುಂದೆ ಈ ರೀತಿ ಆಗದಂತೆ ಜವಾಬ್ದಾರಿ ಹೊರುವ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದರು.
ಮಾಲೂರು ಘಟನೆ ಹಾಗು ಅಂದ್ರಹಳ್ಳಿ ವಿಚಾರದಲ್ಲಿ ವಿದ್ಯಾವಂತರಿಂದಲೇ ಇಂತಹ ಘಟನೆಗಳು ನಡೆಯುತ್ತಿರುವುದು ದುರ್ದೈವ. ಇವರಿಗೆಲ್ಲಾ ನಾಚಿಕೆಯಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ ಶಿಕ್ಷಣ ಸಚಿವರು, ಘಟನೆ ಯಾವಾಗ ನಡೆದಿದ್ದು ಎಂದು ಇಲಾಖಾ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಲಾಗುತ್ತದೆ. ಒಂದು ಘಟನೆ ಬಹಿರಂಗವಾದ ನಂತರ ಹಿಂದಿನ ಘಟನೆಗಳು ಬಹಿರಂಗವಾಗುವುದನ್ನು ನೋಡಿದ್ದೇನೆ. ಹಾಗಾಗಿ ಮೊದಲು ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಮಾಹಿತಿ ಪಡೆಯಲಾಗುತ್ತದೆ ಎಂದು ಹೇಳಿದರು.
ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದರೂ ಇಂತಹ ಘಟನೆಯಾಗುತ್ತಿರುವುದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಲಾಗದು. ಇವು ಹೀನಾಯ ಕೃತ್ಯಗಳಾಗಿದ್ದು, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುವ ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡುತ್ತೇವೆ ಎಂದು ಭರವಸೆ ನೀಡಿದರು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳ ಕೈಯಿಂದಲೇ ಶಿಕ್ಷಕರು ಶೌಚಾಲಯ ಸ್ವಚ್ಛತೆ ಮಾಡಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಾಕಷ್ಟು ಹಿಂದಿನಿಂದಲೂ ಈ ಶಾಲೆಯ ಶಿಕ್ಷಕರು ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸುತ್ತಿದ್ದಾರೆ ಎಂಬ ಆರೋಪವೂ ಬಂದಿರುವ ಹಿನ್ನೆಲೆಯಲ್ಲಿ ಇಂದು ಮಕ್ಕಳ ಪೋಷಕರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಿಂದಾಗಿ ಘಟನೆ ಬಹಿರಂಗಗೊಂಡಿದೆ. ದಿನನಿತ್ಯ ಮಕ್ಕಳೇ ಶೌಚಾಲಯ ಕ್ಲೀನ್ ಮಾಡಬೇಕು. ಮಕ್ಕಳೇ ಶಿಕ್ಷಕರು ಊಟ ಮಾಡುವ ತಟ್ಟೆ ತೊಳೆಯಬೇಕು, ಈ ಬಗ್ಗೆ ಪೋಷಕರು ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಇದೀಗ ವಿಡಿಯೋ ಸಮೇತ ಸಾಕ್ಷಿ ಸಿಕ್ಕಿದೆ. ಶಾಲಾ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಶಾಲೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಕೇಸ್, ಇಬ್ಬರ ಬಂಧನ; ಸ್ಥಳಕ್ಕೆ ಬಿಜೆಪಿ ಸಮಿತಿ ಭೇಟಿ