ಬೆಂಗಳೂರು: ರೈಲು ಹಳಿಗೆ ತಲೆ ಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೊಸಕೋಟೆ ಸಮೀಪದ ಕನ್ನಮಂಗಲದ ನಿವಾಸಿ ಚೇತನಾ (20) ಹಾಗೂ ಸಿರಸ್ ಚಂದ್ರ (21) ಆತ್ಮಹತ್ಯೆಗೆ ಶರಣಾದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂನ ಸೌತ್ ಈಸ್ಟ್ ಏಷ್ಯನ್ (ಎಸ್‌ಇಎ) ಕಾಲೇಜಿನಲ್ಲಿ ಬಿಪಿಎ ವ್ಯಾಸಂಗ ಮಾಡುತ್ತಿದ್ದ ಚೇತನಾ ಮತ್ತು ಸಿರಸ್ ಚಂದ್ರ ಅವರೇ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಇಬ್ಬರೂ ಶುಕ್ರವಾರ ಸಂಜೆ ಹೊರಮಾವು ರೈಲ್ವೆ ಬ್ರಿಡ್ಜ್ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ತಿಳಿದು ತಕ್ಷಣ ಸ್ಥಳಕ್ಕೆ ಬೈಯಪ್ಪನಹಳ್ಳಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಕೂಡ ಪತ್ತೆಯಾಗಿಲ್ಲ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ತೀರ್ಥಹಳ್ಳಿ: ಶಿಕಾರಿಗೆ ತೆರಳಿದ್ದಾಗ ಗುಂಡೇಟಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ಬಲಿ