ಬೆಂಗಳೂರು: ಹವಾಲ ಹಣ ವರ್ಗಾವಣೆ ಆರೋಪದಡಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದಾಗ, ಅವರ ಬೆಂಬಲಿಗರು ನಡೆಸಿದ ಪ್ರತಿಭಟನೆಯಲ್ಲಿ ಆದ ನಷ್ಟವನ್ನು ಲೆಕ್ಕ ಹಾಕಲು ತಜ್ಞ ಅಧಿಕಾರಿಗಳನ್ನು ನೇಮಿಸಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಡಿಕೆಶಿ ಪರ ನಡೆಸಿದ ಪ್ರತಿಭಟನೆಯಲ್ಲಿ ಆದ ಸಾರ್ವಜನಿಕ ಆಸ್ತಿ ನಷ್ಟವನ್ನು ನಾಶಪಡಿಸಿದವರಿಂದಲೇ ಭರಿಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕನಕಪುರ ತಾಲೂಕಿನ ರವಿಕುಮಾರ್ ಎಂಬುವರು ಸಲ್ಲಿಸಿರುವ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿ ನಷ್ಟದ ಮೌಲ್ಯ ನಿರ್ಣಯ ಮಾಡಲು, ಎಕ್ಸಿಕ್ಯೂಟಿವ್ ಎಂಜಿನಿಯರ್ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಸರ್ಕಾರಿ ವಕೀಲರ ಹೇಳಿಕೆಯನ್ನು ಒಪ್ಪದ ಪೀಠ ಎಕ್ಸಿಕ್ಯೂಟಿವ್ ಎಂಜಿನಿಯರ್ ಅಧಿಕಾರಿಯನ್ನು, ತಜ್ಞರೆಂದು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಉನ್ನತ ಮಟ್ಟದ ಜ್ಞಾನ ಹೊಂದಿರುವ ತಜ್ಞರನ್ನು ನೇಮಕ ಮಾಡಿ, ಆ ಕುರಿತು ವರದಿ ನೀಡಿ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.