ಬೆಂಗಳೂರು : ಅಕ್ರಮ ಆಸ್ತಿ ಆರೋಪದ ಮೇರೆಗೆ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಟು ಮಂದಿ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 34 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಅಸಮತೋಲನ ಆಸ್ತಿ ಇರುವುದು ಕಂಡುಬಂದಿರುವ ಬಗ್ಗೆ ಲೋಕಾಯುಕ್ತ ಇಲಾಖೆ ಪ್ರಕಟಣೆ ಹೊರಡಿಸಿದೆ.
1) ಬಳ್ಳಾರಿ ಜಿಲ್ಲೆಯ ಜೆಸ್ಕಾಂನ ಕಾರ್ಯಪಾಲಕ ಅಭಿಯಂತರರಾದ ಹುಸೇನ್ ಸಾಬ್ ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಂಡಿದ್ದು, ಈ ವೇಳೆ ಬಳ್ಳಾರಿಯ ರಾಘವೇಂದ್ರ ಕಾಲೋನಿಯಲ್ಲಿ 60*40 ಅಳತೆಯ ವಿಸ್ತೀರ್ಣದ 1 ವಾಸದ ಮನೆ, ಹೊಸಪೇಟೆಯ ವಿದ್ಯಾನಗರ ಲೇಔಟ್‌ನಲ್ಲಿ 60*40 ಅಳತೆಯ ವಿಸ್ತೀರ್ಣದ 1 ವಾಸದ ಮನೆ, ಹೊಸಪೇಟೆಯ ವಿದ್ಯಾನಗರ ಲೇಔಟ್‌ನಲ್ಲಿ 1 ಖಾಲಿ ನಿವೇಶನ, ಬಳ್ಳಾರಿ ತಾಲ್ಲೂಕು ಸಿದಿಗಿನಮೂಲ ಗ್ರಾಮದಲ್ಲಿ 1 ವಾಸದ ಮನೆ, ಹಡಗಲಿ ತಾಲ್ಲೂಕಿನಲ್ಲಿ ಸುಮಾರು 6 ಎಕರೆ 20 ಗುಂಟೆ ಕೃಷಿ ಜಮೀನು, 4 ನಾಲ್ಕು ಚಕ್ರದ ವಾಹನಗಳು, 2 ದ್ವಿಚಕ್ರ ವಾಹನಗಳು, ಸುಮಾರು 1487 ಗ್ರಾಂ ಚಿನ್ನಾಭರಣ, 680 ಗ್ರಾಂ ಬೆಳ್ಳಿ ವಸ್ತುಗಳು, 23,69,820/- ನಗದು ಪತ್ತೆಯಾಗಿದೆ.
2) ಬೆಂಗಳೂರಿನ ಯಲಹಂಕ ವಲಯದ ಬಿಬಿಎಂಪಿ ನಗರ ಯೋಜನೆ ಕೆ ಎಲ್ ಸಹಾಯಕ ನಿರ್ದೇಶಕರಾದ ಗಂಗಾಧರಯ್ಯ ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 7 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ 14 ಫ್ಲಾಟ್‌ಗಳು, ನೆಲಮಂಗಲದ ಬಳಿ 5 ಎಕರೆ ಕೃಷಿ ಜಮೀನು, ಅಂದಾಜು 73 ಲಕ್ಷ ರೂ. ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಒಡವೆಗಳು, 1.47 ಕೋಟಿ ರೂ. ನಗದು ಹಾಗೂ ವಿದೇಶಿ ಕರೆನ್ಸಿಗಳಾದ 10298 ಅಮೆರಿಕದ ಡಾಲರ್, 1180 ದುಬೈ ದೀರಂ ಹಾಗೂ 35 ಈಜಿಪ್ಟ್ ದೇಶದ ಕರೆನ್ಸಿ ಹಾಗೂ ವಿವಿಧ ಸ್ಥಿರಾಸ್ತಿ ಪತ್ರಗಳು ದೊರೆತಿವೆ. ಸುಮಾರು 50 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದು, ಇನ್ನೂ ಕೂಡ ಶೋಧ ಕಾರ್ಯ ಮುಂದುವರೆದಿದೆ.
3) ಬೀದರ್‌ನ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಮೇಡ ಅವರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಆರೋಪಿ ಬೀದರ್ ನಗರದಲ್ಲಿ 40*60 ಅಳತೆಯ 1 ವಾಸದ ಮನೆ, 40*60 ಅಳತೆಯುಳ್ಳ 3 ಖಾಲಿ ನಿವೇಶನಗಳು, ಬೀದರ್‌ನ ಆನಂದ ನಗರದಲ್ಲಿನ 1 ವಾಸದ ಮನೆ, 3 ನಾಲ್ಕು ಚಕ್ರದ ವಾಹನಗಳು, 3 ದ್ವಿಚಕ್ರ ವಾಹನಗಳು, 11,34,000/- ನಗದು, ಸುಮಾರು 1892 ಗ್ರಾಂ ಚಿನ್ನಾಭರಣಗಳು, ಸುಮಾರು 6 ಕೆಜಿ 628 ಗ್ರಾಂ ಬೆಳ್ಳಿ ಸಾಮಾನುಗಳು, 45 ಲಕ್ಷ ಮೌಲ್ಯದ ಎಲ್.ಐ.ಸಿ ಬಾಂಡ್‌ಗಳು ಪತ್ತೆಯಾಗಿವೆ.
4) ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕು ಮುಡುಬಿ ಹೋಬಳಿ ನಾಡಾ ಕಚೇರಿಯ ಉಪ ತಹಶೀಲ್ದಾರ್ ವಿಜಯ ಕುಮಾರಸ್ವಾಮಿ ಅವರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದು, ಈ ವೇಳೆ ಆರೋಪಿತರು ಬೀದರ್ ನಗರದಲ್ಲಿರುವ 1 ವಾಸದ ಮನೆ, ಬೀದರ್ ಮತ್ತು ಬಸವಕಲ್ಯಾಣದಲ್ಲಿ 15 ನಿವೇಶನಗಳು, ಬಸವಕಲ್ಯಾಣ ತಾಲ್ಲೂಕಿನಲ್ಲಿ 1 ಸಾಯಿ ಸರ್ವಿಸ್ ಆಟೋ ಗ್ಯಾರೇಜ್, 2 ನಾಲ್ಕು ಚಕ್ರದ ವಾಹನಗಳು, 1 ದ್ವಿಚಕ್ರ ವಾಹನ ಮತ್ತು ಚಿನ್ನಾಭರಣ ಪತ್ತೆಯಾಗಿರುತ್ತವೆ. ತನಿಖಾ ಕಾರ್ಯ ಮುಂದುವರೆದಿದೆ.
5) ಬೆಂಗಳೂರು ಬಿಬಿಎಂಪಿ ದೊಮ್ಮನಹಳ್ಳಿ ವಲಯದ ರಾಜಕಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ. ಹನುಮಂತಯ್ಯ ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧ ಸಮಯದಲ್ಲಿ ಆರೋಪಿತರು ಹಿರಿಯೂರು ತಾಲ್ಲೂಕಿನ ಬೋಚಾಪುರ ಗ್ರಾಮದಲ್ಲಿ 25 ಎಕರೆ 23 ಗುಂಟೆ ಅಡಿಕೆ ಮತ್ತು ಬಾಳೆ ತೋಟ, 1 ಫಾರ್ಮ್ ಹೌಸ್, 2 ಪೌಲ್ಟರಿ ಫಾರ್ಮ್‌ಗಳು, ಹಿರಿಯೂರು ನಗರದಲ್ಲಿ 2 ನಿವೇಶನಗಳು, ಬೆಂಗಳೂರು ನಗರದಲ್ಲಿ 1 ವಾಸದ ಮನೆ, 1 ಕಾರು ಮತ್ತು 1 ದ್ವಿಚಕ್ರ ವಾಹನ, ಚಿನ್ನಾಭರಣಗಳು ಹಾಗೂ ಅಪಾರ ಮೌಲ್ಯದ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳು ಪತ್ತೆಯಾಗಿವೆ.
6) ಡಿ.ಸಿ.ಎಫ್ (ನಿವೃತ್ತ) ಐ. ಎಂ ನಾಗರಾಜ ಅವರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಆರೋಪಿತರು ಹೊನ್ನಾಳಿ ಪಟ್ಟಣದಲ್ಲಿ ಒಂದು ವಾಸದ ಮನೆ, ಶಿವಮೊಗ್ಗ ನಗರದ ಲಗಾನ್ ರಸ್ತೆಯಲ್ಲಿ ಒಂದು ಮನೆ ಮತ್ತು ಮಳಿಗೆ, 4 ವಾಣಿಜ್ಯ ಸಂಕೀರ್ಣಗಳು, ಬೆಂಗಳೂರಿನ ಕಗ್ಗಲಪುರದಲ್ಲಿನ 1 ಫ್ಲಾಟ್, ಶಿವಮೊಗ್ಗ ಅನುಪಿನಕಟ್ಟೆ ಗ್ರಾಮದಲ್ಲಿರುವ 1 ಫಾರ್ಮ್ ಹೌಸ್ ಮತ್ತು 10 ಎಕರೆ ಅಡಿಕೆ ತೋಟ, ಶಿವಮೊಗ್ಗ ಸಾಗರ ರಸ್ತೆಯಲ್ಲಿರುವ 1 ದುರ್ಗಾಂಭ ಸರ್ವಿಸ್ ಸ್ಟೇಷನ್, ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿ 1 ಶ್ರೀದೇವಿ ಸರ್ವಿಸ್ ಸ್ಟೇಷನ್, ಶಿವಮೊಗ್ಗ ನಗರ ಅಟಲ್ ಬಿಹಾರಿ ವಾಜಪೇಟೆ ಬಡಾವಣೆಯಲ್ಲಿ 2 ನಿವೇಶನಗಳು, ಶಿವಮೊಗ್ಗ ನಗರದ ದೇವಕಾತಿ ಕೊಪ್ಪ ಕೈಗಾರಿಕಾ ಪ್ರದೇಶದಲ್ಲಿರುವ 1 ಫ್ಲಾಟ್, ಶಿವಮೊಗ್ಗ ತಾಲೂಕು ಮಂಡ್ಲಿ-ಕಲ್ಲೂರು ಕೈಗಾರಿಕಾ ಪ್ರದೇಶದಲ್ಲಿರುವ 3 ಫ್ಲಾಟ್‌ಗಳು, ಶಿವಮೊಗ್ಗ ತಾಲ್ಲೂಕು ಕಸಬಾ ಹೋಬಳಿ ಶ್ರೀರಾಂಪುರ ಗ್ರಾಮದಲ್ಲಿ 2 ನಿವೇಶನಗಳು, 4 ನಾಲ್ಕು ಚಕ್ರದ ವಾಹನಗಳು, 1 ದ್ವಿಚಕ್ರ ವಾಹನ ಮತ್ತು ಸುಮಾರು 16,084,00/- ರೂ. ಬೆಲೆಬಾಳುವ ಚಿನ್ನ-ಬೆಳ್ಳಿ ಆಭರಣಗಳು ಪತ್ತೆಯಾಗಿರುತ್ತವೆ. ತನಿಖಾ ಕಾರ್ಯ ಮುಂದುವರೆದಿದೆ.
7) ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಹಶೀಲ್ದಾರ್ ಎನ್ ಜೆ ನಾಗರಾಜ ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಆರೋಪಿತರು ಶಿಕಾರಿಪುರ ಟೌನ್‌ನ ಚನ್ನಕೇಶವ ನಗರದಲ್ಲಿ 1 ವಾಸದ ಮನೆ, ನಿಂಬಾಪುರ ಗ್ರಾಮದಲ್ಲಿ 1 ವಾಸದ ಮನೆ, ಚನ್ನಗಿರಿ ತಾಲ್ಲೂಕಿನಲ್ಲಿ ಕೃಷಿ ಜಮೀನು, ಸುಮಾರು 244 ಗ್ರಾಂ ಚಿನ್ನಾಭರಣ, ಸುಮಾರು 533 ಗ್ರಾಂ ಬೆಳ್ಳಿ ಸಾಮಾನುಗಳು, 1 ಕಾರು, 1 ದ್ವಿಚಕ್ರ ವಾಹನ, ಆರೋಪಿತ ಅಧಿಕಾರಿ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಸ್ಥಿರಾಸ್ತಿ ಪತ್ರಗಳು ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಹಣ ಹೂಡಿಕೆ ಮಾಡಿರುವ ಪತ್ರಗಳು ಪತ್ತೆಯಾಗಿರುತ್ತವೆ. ತನಿಖಾ ಕಾರ್ಯ ಮುಂದುವರೆದಿದೆ.
8) ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಚೇರಿ ಇ ಓ ವೆಂಕಟೇಶಪ್ಪ ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಆರೋಪಿ 14 ಎಕರೆ ಕೃಷಿ ಜಮೀನು, ಬಂಗಾರಪೇಟೆ ಟೌನ್‌ನಲ್ಲಿ 1 ನಿವೇಶನ, ಬಂಗಾರಪೇಟೆ ಟೌನ್‌ನಲ್ಲಿ 1 ವಾಸದ ಮನೆ, ತಿಪ್ಪದೊಡ್ಡಹಳ್ಳಿಯಲ್ಲಿ 1 ವಾಸದ ಮನೆ, ಬಂಗಾರಪೇಟೆಯ ಎಸ್ ಎನ್ ಸಿಟಿಯಲ್ಲಿ ನಿರ್ಮಾಣ ಹಂತದಲ್ಲಿರುವ 1 ಮನೆ, 1 ಹಾರ್ಡ್‌ವೇರ್ ಶಾಪ್ ಮತ್ತು ಗೋಡೌನ್, 4 ಪೌಲ್ಟರಿ ಫಾರ್ಮ್‌ಗಳು, ಸುಮಾರು 550 ಗ್ರಾಂ ಚಿನ್ನಾಭರಣ, ಸುಮಾರು 3 ಕೆಜಿ 500 ಗ್ರಾಂ ಬೆಳ್ಳಿ ವಸ್ತುಗಳು, 2 ಕಾರುಗಳು, 1 ಟ್ರಾಕ್ಟರ್, 4 ದ್ವಿಚಕ್ರ ವಾಹನಗಳು ಪತ್ತೆಯಾಗಿರುತ್ತವೆ. ತನಿಖಾ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ : ಹುಬ್ಬಳ್ಳಿಯ ಬಿಲ್ಡರ್ಸ್ ಮನೆ, ಕಚೇರಿ ಮೇಲೆ ಐಟಿ ದಾಳಿ: ದಾಖಲೆ ಪರಿಶೀಲನೆ