ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೌಡಿ ಕುಣಿಗಲ್ ಗಿರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಕುಣಿಗಲ್ ಗಿರಿ ಇತ್ತೀಚೆಗೆ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಡೆಸಿ ಹಣ ಮಾಡುತ್ತಿದ್ದ. ಈತನ ವಿಚಾರ ತಿಳಿದು ಸಿಸಿಬಿ ವಶಕ್ಕೆ ಪಡೆದಿದೆ. ಅಲ್ಲದೆ ಲೋಕಸಭೆ ಚುನಾವಣೆ ಬರುತ್ತಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಈತನನ್ನ ವಶಕ್ಕೆ ಪಡೆದಿದ್ದೇವೆ. ಕುಣಿಗಲ್ ಗಿರಿ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.
ಗಿರಿ ಕುಣಿಗಲ್ ನಿವಾಸಿಯಾಗಿದ್ದು, ಈತನ ಅಪ್ಪ ಅರ್ಚಕರಾಗಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಫೇಲ್ ಆದ ನಂತರ ದೇವಸ್ಥಾನ ಕಳ್ಳತನಕ್ಕಿಳಿದ ಗಿರಿಯನ್ನು ತಂದೆಯೇ ಮನೆಯಿಂದ ಹೊರಹಾಕಿದ್ದ. ಅಲ್ಲಿಂದ ಬೆಂಗಳೂರಿಗೆ ಬಂದ ಈತ ಸುಮಾರು 132ಕ್ಕೂ ಹೆಚ್ಚು ರಾಬರಿ, ಕಳ್ಳತನ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ.
ಮೊನ್ನೆ ತಾನೆ ನಡೆದ ಸಿಲಿಕಾನ್ ಸಿಟಿಯ ರೌಡಿಗಳ ಪರೇಡ್ ವೇಳೆ ಕುಣಿಗಲ್ ಗಿರಿ ಬಂದಿದ್ದ. ಬಳಿಕ ನಿನ್ನೆ ಗಿರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.