ಬೆಂಗಳೂರು: ಲಾಕ್ಡಾನ್ಅನ್ನೇ ಬಂಡವಾಳ ಮಾಡಿಕೊಂಡು ಸ್ವಂತ ಬಾವನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಸುದ್ದಗುಂಟೆಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಮಸೂದ್ ಬಂಧಿತ ಆರೋಪಿ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪಿಯ ಅಬ್ದುಲ್ ರಶೀದ್ ಎಂಬುವರ ಮನೆಯಲ್ಲಿ ಪತ್ನಿಯ ಸಹೋದರನಾಗಿದ್ದ ಆರೋಪಿ ಅಬ್ದುಲ್ ರಶೀದ್ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಭಿನ್ನಾಭಿಪ್ರಾಯಗಳಿಂದ ಕೆಲ ದಿನಗಳ ಹಿಂದೆ ಈತ ಕೆಲಸ ಬಿಟ್ಟಿದ್ದ ಎನ್ನಲಾಗುತ್ತಿದೆ.
ಇತ್ತಿಚಿಗೆ ಲಾಕ್ಡೌನ್ ಪರಿಣಾಮ ರಶೀದ್ರವರ ಕುಟುಂಬ ತಮ್ಮ ಮಗಳ ಮನೆಗೆ ತೆರಳಿದ್ದರು. ಇವರ ಮನೆಯಲ್ಲಿ ಆರೋಪಿಯ ತಂಗಿ ಮನೆಗೆಲಸ ಮಾಡುತ್ತಿದ್ದು, ರಶೀದ್ ಮನೆಯಲ್ಲಿ ಹಣ, ಒಡವೆಗಳಿರುವ ವಿಚಾರವನ್ನು ಮಸೂದ್ಗೆ ತಿಳಿಸಿದ್ದಳು. ಹಣದ ಆಸೆಯಿಂದ ಮಸೂದ್ ತನ್ನ ಬಾವನ ಮನೆಗೆ ಕನ್ನ ಹಾಕಿ ಹಣ, ಒಡವೆಗಳನ್ನೆಲ್ಲ ಕಳ್ಳತನ ಮಾಡಿದ್ದನು. ಆದರೆ ಇವುಗಳನ್ನು ಮಾರಲಾಗದೆ ಪರದಾಡ ನಡೆಸಿದ್ದ.
ಇನ್ನು ಮನೆಗೆ ಬಂದು ಮಾಲೀಕ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಎಚ್ಚೆತ್ತ ಮಾಲೀಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಾಮೈದುನನೇ ಕಳ್ಳ ಎಂಬ ವಿಷಯ ತಿಳಿದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ 6 ಲಕ್ಷ ನಗದು,171 ಗ್ರಾಂ ಚಿನ್ನ, ಮೈಕ್ರೋ ಓವೆನ್,ಸೀರೆಗಳು, ಆಸ್ತಿ ಪತ್ರ ವಶಕ್ಕೆ ಪಡೆದಿದ್ದಾರೆ.