ಬೆಂಗಳೂರು: ಲಾಕ್ಡೌನ್ನಿಂದಾಗಿ ಬೃಹತ್ ಕೈಗಾರಿಕೆಗಳು ಸೇರಿದಂತೆ ಸಣ್ಣ-ಪುಣ್ಣ ವ್ಯಾಪಾರಸ್ಥರಿಗೂ ಸಮಸ್ಯೆಯಾಗಿದೆ. ಅಲ್ಲದೆ ಪೆಟ್ರೋಲ್ ಬಂಕ್ಗಳೂ ಸಹ ಲಾಕ್ಡೌನ್ನಿಂದಾಗಿ ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾಗಿವೆ.
ಅಗತ್ಯ ಸೇವೆಗಳಲ್ಲಿ ಒಂದಾದ ಪೆಟ್ರೋಲ್ ಹಾಗೂ ಡೀಸೆಲ್ ಸರಬರಾಜು ನಗರದಲ್ಲಿ ಎಂದಿನಂತೆ ಸಾಗಿದ್ದು, ಯಾವುದೇ ರೀತಿಯಲ್ಲಿ ವ್ಯತ್ಯಯವಾಗಿಲ್ಲ. ಆದರೆ ಕೊರೊನಾ ಹೆಮ್ಮಾರಿಯಿಂದ ರಸ್ತೆಗೆ ವಾಹನಗಳು ಇಳಿಯದ ಪರಿಣಾಮ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟವಾಗಿಲ್ಲ.
ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 80 ಲಕ್ಷ ಲೀಟರ್ ಪೆಟ್ರೋಲ್ ಹಾಗೂ 2 ಲಕ್ಷ ಲೀಟರ್ ಡೀಸೆಲ್ ಮಾರಾಟವಾಗುತಿತ್ತು. ಲಾಕ್ಡೌನ್ನಿಂದ ಮಾರ್ಚ್ ತಿಂಗಳಲ್ಲಿ ಸುಮಾರು 50 ಲಕ್ಷ ಲೀಟರ್ ಪೆಟ್ರೋಲ್ ಹಾಗೂ 80 ಸಾವಿರ ಲೀಟರ್ ಡೀಸೆಲ್ ಮಾತ್ರ ಮಾರಾಟವಾಗಿದೆ.
ಈ ಮೂಲಕ ಶೇ. 30ರಿಂದ 35ರಷ್ಟು ಕುಸಿತ ಕಂಡಿದೆ. ಗ್ರಾಹಕರ ಕೊರತೆಯಿಂದಾಗಿ ಏಪ್ರಿಲ್ ತಿಂಗಳಲ್ಲಿ ಶೇ. 95ರಷ್ಟು ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟವಾಗದೆ ಇರುವುದು ಕಂಡುಬಂದಿದೆ. ಈ ಮೂಲಕ 30 ಕೋಟಿ ರೂ. ವ್ಯವಹಾರ ಸ್ಥಗಿತವಾಗಿದೆ. ಸದ್ಯ ತುರ್ತು ಸೇವೆಗಳಾದ ಪೊಲೀಸ್, ಆಂಬ್ಯುಲೆನ್ಸ್, ಫುಡ್ ಸಪ್ಲೈ, ಮಾಧ್ಯಮ ಸೇರಿದಂತೆ ಅಗತ್ಯ ಸೇವೆ ಒದಗಿಸುವ ವಾಹನಗಳಿಗೆ ಮಾತ್ರ ಸೇವೆ ನೀಡಬೇಕೆಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಇದರ ಹೊರತಾಗಿಯೂ ಬಂಕ್ಗಳಿಗೆ ಬರುವ ಗ್ರಾಹಕರಿಗೂ ಪೆಟ್ರೋಲ್ ಸೇವೆ ಒದಗಿಸಲಾಗುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಪೆಟ್ರೋಲ್ ಉತ್ಪನ್ನಗಳ ಸರಬರಾಜು ಸರಪಳಿ ಮುರಿಯದಂತೆ ಆಯಿಲ್ ಕಂಪನಿಗಳು ಸಹಕಾರ ನೀಡುತ್ತಿರುವುದರಿಂದ ನಗರದಲ್ಲಿ ಯಾವುದೇ ರೀತಿಯ ತೊಂದರೆ ಕಂಡುಬಂದಿಲ್ಲ.
ಬೆಂಗಳೂರಿನ ದೇವನಗುಂದಿ, ಹಾಸನ, ಮೈಸೂರು ಹಾಗೂ ಮಂಗಳೂರಿನಲ್ಲಿ ಪೆಟ್ರೋಲ್ ಸರಬರಾಜು ಕೇಂದ್ರಗಳಿವೆ. ಮುಂದಿನ ದಿನಗಳಲ್ಲಿ ನಮ್ಮ ಸೇವೆ ನೀಡಲಾಗುವುದು ಎಂದು ಈಟಿವಿ ಭಾರತ್ಗೆ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಮಾಲೀಕರ ಅಧ್ಯಕ್ಷ ಡಾ. ಬಾಲಾಜಿ ಮಾಹಿತಿ ನೀಡಿದರು.