ಬೆಂಗಳೂರು : ವಿವಿಧ ಅಪರಾಧ ಎಸಗಿ ಜೈಲು ಸೇರಿರುವ ಅನಕ್ಷರಸ್ಥ ಸಜಾಬಂಧಿಗಳಿಗೆ ಅಕ್ಷರ ಕಲಿಸುವ ಉದ್ದೇಶದಿಂದ ಕಾರಾಗೃಹ ಹಾಗೂ ಸುಧಾರಣಾ ಇಲಾಖೆ ಹಾಗೂ ಲೋಕ ಶಿಕ್ಷಣ ನಿರ್ದೇಶನಶಾಲಯ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಸಜಾಬಂಧಿಗಳಲ್ಲಿ ಶಿಕ್ಷಣ ಹಾಗೂ ಕೌಶಲ್ಯ ಹೆಚ್ಚಿಸಲು ಅಕ್ಷರ ಕಲಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವೆಂಬಂತೆ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಾಲನೆ ನೀಡಲಾಗಿದೆ.
ರಾಜ್ಯದಲ್ಲಿ 50 ಕಾರಾಗೃಹಗಳಲ್ಲಿ 15 ಸಾವಿರ ಕೈದಿಗಳಿದ್ದು, 7 ಸಾವಿರ ಅಕ್ಷರಸ್ಥ ಹಾಗೂ ಅರೆ ಅಕ್ಷರಸ್ಥ ಕೈದಿಗಳಿದ್ದಾರೆ. 3 ಸಾವಿರ ಮಂದಿ ಎಸ್ಎಸ್ಎಲ್ಸಿ ಹಾಗೂ ತತ್ಸಮಾನ ಶಿಕ್ಷಣ ಪಡೆದಿದ್ದಾರೆ. 2100ಕ್ಕೂ ಹೆಚ್ಚು ಮಂದಿ ಕೈದಿಗಳು ಪಿಯುಸಿ ಆಥವಾ ಡಿಪ್ಲೋಮಾ ಪಡೆದರೆ, 1000 ಮಂದಿ ಪದವೀಧರರಾಗಿದ್ದಾರೆ. 100ಕ್ಕೂ ಹೆಚ್ಚು ಕೈದಿಗಳು ಇಂಜಿನಿಯರ್, ಕಾನೂನು, ಪದವಿ ಹಾಗೂ ಉನ್ನತ ಶಿಕ್ಷಣ ಪಡೆದಿದ್ದಾರೆ.
ಅನಕ್ಷರಸ್ಥರಿಗೆ ಬೋಧಿಸಲು ಸಂಪನ್ಮೂಲ ವ್ಯಕ್ತಿಗಳಾಗಿ ಜೈಲಿನಲ್ಲಿ ವ್ಯಾಸಂಗ ಮಾಡಿದ್ದ ಕೈದಿಗಳಿಗೆ ಲೋಕ ಶಿಕ್ಷಣ ನಿರ್ದೇನಶಾಲಯ ತರಬೇತಿ ನೀಡುತ್ತಿದೆ. ಅನಕ್ಷರಸ್ಥರಲ್ಲಿ ಸಾಕ್ಷರತೆ ಹೆಚ್ಚಿಸುವುದರಿಂದ ಬಂಧಿಗಳ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನ ಹೆಚ್ಚಾಗಲಿದ್ದು, ಈ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ.
ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ : ಮತ ಎಣಿಕೆಗೆ ಹಾವೇರಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ