ಬೆಂಗಳೂರು : ಕೃಷಿಮೇಳದ ಮೂರನೇ ದಿನಕ್ಕೆ ಸಿನಿ ದಿಗ್ಗಜರು ಬಂದು ಮೆರುಗು ಹೆಚ್ಚಾಗಿತ್ತು. ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಕೃಷಿ ಮೇಳಕ್ಕೆ ಆಗಮಿಸಿ, ತಮ್ಮ ಕೃಷಿಗೆ ಬೇಕಾದ ಸಲಕರಣೆ ಖರೀದಿಸಿದರು.
ಕೃಷಿ ಮೇಳಕ್ಕೆ ಆಗಮಿಸಿದ ಲೀಲಾವತಿ ಹಾಗೂ ವಿನೋದ್ ರಾಜ್ ಜೊತೆಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದರು. ಈ ವೇಳೆ ದೀಪಾವಳಿಯ ವಿಶೇಷವಾಗಿ ಮಾರಾಟಗಾರರು ಮಣ್ಣಿನ ಹಣತೆಗಳನ್ನು ಕೊಡುಗೆಯಾಗಿ ನೀಡಿದರು.
ಈಟಿವಿ ಭಾರತ್ ಜೊತೆ ಮಾತನಾಡಿದ, ಹಿರಿಯ ನಟಿ ಲೀಲಾವತಿ, ನಾವು ಹತ್ತು ವರ್ಷದಿಂದ ಕೃಷಿ ಮಾಡುತ್ತಿದ್ದೇವೆ. ಪ್ರತೀ ವರ್ಷ ಕೃಷಿಮೇಳಕ್ಕೆ ಭೇಟಿ ನೀಡುತ್ತೇವೆ ಎಂದರು. ನಟ ವಿನೋದ್ ರಾಜ್ ಮಾತನಾಡಿ, ಅಡಿಕೆ ಸುಲಿಯುವ ಯಂತ್ರ ಕೊಂಡುಕೊಳ್ಳಲು ಬಂದಿದ್ದು, ಜೊತೆಗೆ ಕಪ್ಪು ಸೀತಾಫಲ ಹಾಗೂ ವಿವಿಧ ಹಣ್ಣಿನ ಗಿಡಗಳನ್ನು ಕೊಂಡುಕೊಳ್ಳಲು ಬಂದಿರುವುದಾಗಿ ತಿಳಿಸಿದರು. ಒಟ್ಟಿನಲ್ಲಿ ಸಿನಿ ದಿಗ್ಗಜರ ಆಗಮನದಿಂದ ಕೃಷಿ ಮೇಳದಲ್ಲಿದ್ದ ಜನರ ಸಂತಸ ಇಮ್ಮಡಿಯಾಗಿದ್ದಂತೂ ಸುಳ್ಳಲ್ಲ.