ಬೆಂಗಳೂರು: ಗುಜರಾತ್ ನಲ್ಲಿ 27 ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವುದ ಮತದಾನೋತ್ತರ ಸಮೀಕ್ಷೆಯಿಂದ ದೃಢಪಟ್ಟಿದ್ದು, ಕರ್ನಾಟಕದಲ್ಲಿಯೂ ಗುಜರಾತ್ ಮಾದರಿಯಲ್ಲೇ ಬಿಜೆಪಿ ಮೋಡಿ ಮಾಡಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಎಂದರೆ ಅಭಿವೃದ್ಧಿ, ಬಿಜೆಪಿ ಎಂದರೆ ರೈತಪರ, ಸ್ವಚ್ಛ ಭಾರತ ಎಂದರೆ ಬಿಜೆಪಿ, ಮೂಲಸೌಕರ್ಯ, ರಸ್ತೆಗಳ ನಿರ್ಮಾಣ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಇಡೀ ದೇಶಕ್ಕೇ ಗೌರವ, ಗೌರವಯುತ ಪಾರ್ಟಿ ಎಂದರೆ ಬಿಜೆಪಿ- ಹೀಗೆ ಭಾರತೀಯ ಜನತಾ ಪಾರ್ಟಿ ದೇಶದ 130 ಕೋಟಿ ಜನರು ದೇಶದ ಕುರಿತು ಹೆಮ್ಮೆ ಪಡುವ ರೀತಿಯಲ್ಲಿ ಕೇಂದ್ರ - ವಿವಿಧ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ ಎಂದು ತಿಳಿಸಿದರು.
ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಬಿಜೆಪಿ ಮೋಡಿ ಮಾಡಲಿದೆ. ಮತ್ತೆ ಅಧಿಕಾರಕ್ಕೆ ಏರಲಿದೆ. ಬೊಮ್ಮಾಯಿ - ಯಡಿಯೂರಪ್ಪ ಜೋಡಿ ಈ ಮೋಡಿ ಮಾಡುವುದು ಖಚಿತ. ಎಸ್‍ಸಿ, ಎಸ್‍ಟಿ ಮೀಸಲಾತಿಯನ್ನು ನಮ್ಮ ಸರಕಾರ ಹೆಚ್ಚಿಸಿದೆ. 55 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಲಾಗಿದೆ. ರೈತರ ಮಕ್ಕಳಿಗೆ, ನೇಕಾರರ ಮಕ್ಕಳಿಗೆ, ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಸ್ಕಾಲರ್‍ಶಿಪ್ ಕೊಡುತ್ತಿದ್ದಾರೆ. ಪ್ರವಾಹ ಪೀಡಿತರ ಪರಿಹಾರ ಹೆಚ್ಚಿಸಲಾಗಿದೆ ಎಂದು ತಮ್ಮ ಸರ್ಕಾರದ ಸಾಧನೆ ತಿಳಿಸಿದರು.
ಹಸು, ಎತ್ತು, ಮೇಕೆ ಕಳೆದು ಕೊಂಡವರಿಗೆ ಪರಿಹಾರವನ್ನೂ ನಮ್ಮ ಸರಕಾರ ಕೊಡುತ್ತಿದೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಅಭಿವೃದ್ಧಿಯ ಪರ್ವ ನಡೆಯುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷದವರು ಸುಮ್ಮನೆ ಏನೇನೋ ಹೇಳುತ್ತಾರೆ. ಸಿದ್ದರಾಮಯ್ಯ ಅವರು ಕೇವಲ ಭಾಷಣ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಶಿರಾ ಪಟ್ಟಣದಲ್ಲಿ ಜೆಡಿಎಸ್ನ ಪಂಚರತ್ನ ರಥಯಾತ್ರೆ: ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ