ಬೆಂಗಳೂರು: ಬೆಳೆಗಳನ್ನು ಕೀಟಗಳಿಂದ ರಕ್ಷಣೆ ಮಾಡಬೇಕಾದರೆ ಕೀಟನಾಶಕಗಳ ಸಿಂಪಡಣೆ ಮಾಡಬೇಕು. ಅತಿಯಾದ ಕೀಟನಾಶಕಗಳ ಸಿಂಪಡಣೆ ರೈತ ಮತ್ತು ಗ್ರಾಹಕನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೊಂದು ಸುಲಭ ಪರಿಹಾರವನ್ನು ಐಐಹೆಚ್ಆರ್ ಕೃಷಿ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಬೆಳಕು ಸೆಳೆತದ ಬಲೆಯಿಂದ ಬೆಳೆಗಳ ಮೇಲಿನ ಕೀಟಬಾಧೆಯನ್ನ ನಿಯಂತ್ರಣ ಮಾಡಬಹುದು.
ಟೊಮೆಟೊ, ಬದನೆಕಾಯಿ, ಮೆಣಸಿನಕಾಯಿ, ಆಲೂಗಡ್ಡೆ ಮತ್ತಿತರ ತರಕಾರಿಗಳ ಮೇಲೆ ಹೂಜಿ ಕೀಟಗಳ ಬಾಧೆ ಇರುತ್ತದೆ. ನರ್ಸರಿ ಹಂತದಿಂದಲೇ ಗಿಡಗಳ ಮೇಲೆ ದಾಳಿ ನಡೆಸುತ್ತವೆ. ಗಿಡದ ಎಲೆ, ಕಾಂಡ ಮತ್ತು ಕಾಯಿಗಳ ಮೇಲೂ ದಾಳಿ ನಡೆಸಿ ಬೆಳೆ ನಾಶಕ್ಕೆ ಕಾರಣವಾಗುತ್ತದೆ. ಶೇ. 90ರಷ್ಟು ಬೆಳೆಯನ್ನ ಕೀಟಗಳು ನಾಶ ಮಾಡುತ್ತವೆ.
ಬೆಳೆಗಳನ್ನ ಕೀಟಗಳಿಂದ ರಕ್ಷಣೆ ಮಾಡಲು ರೈತರು ಕೀಟನಾಶಕ ಬಳಕೆ ಮಾಡುತ್ತಾರೆ. ಆದರೆ ಅತಿಯಾದ ಕೀಟನಾಶಕಗಳ ಬಳಕೆ ರೈತ ಮತ್ತು ಗ್ರಾಹಕನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೀಟನಾಶಕಗಳ ಬಳಕೆ ಇಲ್ಲದೆ ತಂತ್ರಜ್ಞಾನದ ಮೂಲಕ ಕೀಟಗಳ ನಿಯಂತ್ರಣ ಮಾಡುವ ಬಗ್ಗೆ ಸಂಶೋಧನೆ ನಡೆಸಿದ ಐಐಹೆಚ್ಆರ್ ವಿಜ್ಞಾನಿಗಳು, ಬೆಳಕಿನ ಸಹಾಯದಿಂದ ಕೀಟಗಳನ್ನ ಕೊಲ್ಲುವ ಲೈಟ್ ಕಮ್ ಸಕ್ಷನ್ ಟ್ರ್ಯಾಪ್ (ಬೆಳಕು ಸೆಳೆತದ ಬಲೆ) ತಂತ್ರಜ್ಞಾನದ ಆವಿಷ್ಕಾರ ಮಾಡಿದ್ದಾರೆ. ಇದರಲ್ಲಿ ವಿದ್ಯುತ್ ಚಾಲಿತ ಫ್ಯಾನ್ ಮತ್ತು ಬೆಳಕಿನ ವ್ಯವಸ್ಥೆ ಇರುತ್ತದೆ.
60 ವೋಲ್ಟ್ ಬಲ್ಬ್ ಬೆಳಕಿನ ವ್ಯವಸ್ಥೆಗೆ ಬಳಸಲಾಗುತ್ತದೆ. ಇದರ ಬೆಳಕು ಪತಂಗದ ರೂಪದಲ್ಲಿರುವ ಕೀಟಗಳನ್ನ ತನ್ನತ್ತ ಸೆಳೆಯುತ್ತೆ. ಬಲ್ಬ್ ಕೆಳಗೆ ತಿರುಗುತ್ತಿರುವ ಫ್ಯಾನ್ ಕೀಟಗಳನ್ನ ಬಲೆಯೊಳಗೆ ಸೆಳೆಯುತ್ತೆ. ಬೆಳಕು ಸೆಳೆತದ ಬಲೆ ಸಂಜೆ 6ರಿಂದ 11 ಗಂಟೆಯವರೆಗೆ 5 ತಾಸುಗಳಲ್ಲಿ ಗಂಡು ಮತ್ತು ಹೆಣ್ಣು ಕೀಟಗಳ ಆಕ್ಷೇಪಣೆ ಮಾಡಿ ಕೊಲ್ಲುತ್ತದೆ. ಮತ್ತೊಂದು ತಂತ್ರಜ್ಞಾನದಲ್ಲಿ ದಿನದ ಎಲ್ಲಾ ಸಮಯದಲ್ಲೂ ಗಂಡು ಕೀಟಗಳನ್ನ ಕೊಲ್ಲುತ್ತದೆ. ಇದರಿಂದ ಕೀಟಗಳ ನಡುವೆ ಸಂತನೋತ್ಪತಿಯಾಗದೆ ಕೀಟಗಳ ಒಂದು ಸಂತತಿ ನಿಯಂತ್ರಣಕ್ಕೆ ತಂದು ಬೆಳೆಯ ರಕ್ಷಣೆ ಮಾಡಬಹುದು.