ಬೆಂಗಳೂರು: ಕೆಂಪು ವಲಯ ಪಟ್ಟಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಕೈ ಬಿಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯದಲ್ಲಿ ಬೆಂಗಳೂರು ನಗರ, ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರವನ್ನು ಕೆಂಪು ಪಟ್ಟಿಗೆ ಸೇರಿಸಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಸದ್ಯ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ. ಇದ್ದ ಆರು ಕೊರೊನಾ ಸೋಂಕಿತ ವ್ಯಕ್ತಿಗಳೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆದರೂ ಕೇಂದ್ರ ಸರ್ಕಾರ ಬೆಂ. ಗ್ರಾಮಾಂತರವನ್ನು ಕೆಂಪು ವಲಯ ಪಟ್ಟಿಗೆ ಸೇರಿಸಿದೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವ ಆರ್.ಅಶೋಕ್ ಬೆಂಗಳೂರು ಗ್ರಾಮಾಂತರವನ್ನು ಕೆಂಪು ವಲಯ ಪಟ್ಟಿಯಿಂದ ಮುಕ್ತಗೊಳಿಸಲು ಕೇಂದ್ರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಒಂದೇ ಒಂದು ಕೊರೊನಾ ಕೇಸ್ ಇಲ್ಲ. ಹೀಗಾಗಿ ಕೇಂದ್ರಕ್ಕೆ ಪತ್ರ ಬರೆದು ವಾಸ್ತವ ತಿಳಿಸಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಅಲ್ಲಿನ ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದೇನೆ. ಬೆಂಗಳೂರು ಗ್ರಾಮಾಂತರದಲ್ಲಿನ ಎಲ್ಲಾ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಗುತ್ತಿದೆ. ಯಾರೇ ಕೈಗಾರಿಕೋದ್ಯಮಿಗಳು ಕೈಗಾರಿಕೆ ತೆರೆಯಲು ಅನುಮತಿ ಕೇಳಿದರೆ ಎರಡು ತಾಸಿನಲ್ಲಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದೇನೆ ಎಂದಿದ್ದಾರೆ.